ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ? ಅಂತರಂಗದ ಶಕ್ತಿಯನ್ನು ಅರಿಯುವ ಸರಳ ವಿಧಾನ
ನಮ್ಮ ಮನಸ್ಸಿನ ಆಲೋಚನೆಗಳು ಮತ್ತು ಭಾವನೆಗಳು ನಮ್ಮ ಜೀವನವನ್ನು ಹೇಗೆ ಪ್ರಭಾವಿಸುತ್ತವೆ? ಮನಸ್ಸನ್ನು ಅರ್ಥಮಾಡಿಕೊಳ್ಳಲು ಮತ್ತು ಸಮತೋಲನದಲ್ಲಿರಿಸಲು ಸಹಾಯ ಮಾಡುವ ಸರಳ ಕನ್ನಡ ಲೇಖನ ಇದಾಗಿದೆ.
ನಮ್ಮ ಮನಸ್ಸು ಎಂದರೇನು?
ನಮ್ಮ ಅಸ್ತಿತ್ವದ ಅತ್ಯಂತ ನಿಗೂಢ ಮತ್ತು ಶಕ್ತಿಯುತ ಭಾಗವೆಂದರೆ ಅದು ‘ಮನಸ್ಸು’. ಇದು ಕೇವಲ ಒಂದು ಪದವಲ್ಲ; ಬದಲಿಗೆ ನಮ್ಮ ಬದುಕಿನ ಕ್ಷಣಕ್ಷಣದ ಘಟನೆಗಳು, ಸಂಬಂಧಗಳು, ಭಾವನೆಗಳು ಮತ್ತು ವ್ಯಕ್ತಿತ್ವವನ್ನು ರೂಪಿಸುವ ಒಂದು ಮಹಾನ್ ಶಕ್ತಿ.
ಮನಸ್ಸಿನ ಸ್ವರೂಪ: ನಮ್ಮ ಮನಸ್ಸು ಅಸಂಖ್ಯಾತ ಚಿಂತೆ ಮತ್ತು ಆಲೋಚನೆಗಳ ಒಂದು ಸಂಕೀರ್ಣ ಕಂತೆ. ವಿಜ್ಞಾನ ಮತ್ತು ಆಧ್ಯಾತ್ಮದ ದೃಷ್ಟಿಯಲ್ಲಿ ಹೇಳುವುದಾದರೆ, ಮನಸ್ಸಿನಲ್ಲಿ ಮೂಡುವ ಪ್ರತಿಯೊಂದು ಯೋಚನೆಯೂ ಒಂದು ನಿರ್ದಿಷ್ಟ ತರಂಗಾಂತರ (Frequency) ಮತ್ತು ವೇಗವನ್ನು ಹೊಂದಿರುತ್ತದೆ. ನಾವು ಮಾಡುವ ಪ್ರತಿಯೊಂದು ಆಸೆ, ಅನುಭವಿಸುವ ಪ್ರತಿಯೊಂದು ಭಾವನೆ ಒಂದು ತರಂಗದಂತೆ ಸ್ಪಂದಿಸುತ್ತದೆ. ಈ ವೈವಿಧ್ಯಮಯ ತರಂಗಗಳೆಲ್ಲವೂ ಸಂಗಮವಾಗುವ ಆ ಅದೃಶ್ಯ ಬಿಂದುವೇ ನಮ್ಮ ‘ಮನಸ್ಸು’.
ಮನಸ್ಸು ಎಲ್ಲಿದೆ? ಇದು ಎಲ್ಲರನ್ನೂ ಕಾಡುವ ಒಂದು ಸನಾತನ ಪ್ರಶ್ನೆ. ಭೌತಿಕವಾಗಿ ನಮಗೆ ಹೃದಯ ಅಥವಾ ಮಿದುಳು ಕಾಣಿಸುತ್ತದೆಯೇ ಹೊರತು ‘ಮನಸ್ಸು’ ಎಂಬ ಅಂಗ ಗೋಚರಿಸುವುದಿಲ್ಲ. ಮನಸ್ಸು ಎಂಬುದು ದೇಹದ ಯಾವುದೋ ಒಂದು ಮೂಲೆಯಲ್ಲಿ ಕೂತಿರುವ ವಸ್ತುವಲ್ಲ; ಅದು ನಮ್ಮ ಇಡೀ ಅಸ್ತಿತ್ವದಲ್ಲಿ ವ್ಯಾಪಿಸಿರುವ ಒಂದು ಚೈತನ್ಯ. ಮಿದುಳು ಒಂದು ಯಂತ್ರವಾದರೆ (Hardware), ಮನಸ್ಸು ಅದನ್ನು ನಡೆಸುವ ತಂತ್ರಾಂಶದಂತೆ (Software).
ಸಂಕ್ಷಿಪ್ತವಾಗಿ ಹೇಳುವುದಾದರೆ: ನಮ್ಮ ಆಲೋಚನೆಗಳು ತರಂಗಗಳಾಗಿ ಬದಲಾಗಿ, ಆ ತರಂಗಗಳ ವೇಗ ಮತ್ತು ಸ್ಪಂದನಗಳು ಒಂದೆಡೆ ಸೇರಿ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವುದೇ ಮನಸ್ಸು.
ಮನಸ್ಸುʼ ಒಂದು ವಿಷಯಕ್ಕೆ ಸೀಮಿತವಾಗಿರದೆ ಹಲವು ಸನ್ನಿವೇಷಗಳು, ಘಟನೆಗಳು, ಭಾವನೆಗಳು, ಸಂಬಂಧಗಳು ಹಾಗೂ ವ್ಯಕ್ತಿತ್ವವು ಸೇರಿದಂತೆ ಹಲವು ಆಯಾಮಗಳಿಗೆ ಸಾಕ್ಷಿಯಾಗುತ್ತಾ ಬಂದಿದೆ.
ನಮ್ಮ ಮನಸ್ಸು ಚಿಂತೆ, ಯೋಚನೆ ಆಲೋಚನೆಗಳ ಒಂದು ಕಂತೆ. ನಮ್ಮ ಮನಸ್ಸಿನಲ್ಲಿ ಒಂದು ಯೋಚನೆ ಉತ್ಪತ್ತಿಯಾದಾಗ ಅದು ಒಂದು ತರಂಗದ ವೇಗದಲ್ಲಿ ಸ್ಪಂದಿಸುತ್ತದೆ. ಹೀಗೆ ಪ್ರತಿಯೊಂದು ಯೋಚನೆಗೂ, ಆಸೆಗೂ, ಭಾವನೆಗೂ ನಿಗದಿತ ತರಂಗದ ವೇಗವಿರುತ್ತದೆ. ಇವೆಲ್ಲವೂ ಒಂದೇ ಸ್ಥಳಕ್ಕೆ ಬಂದು ಕೂಡಿಕೊಳ್ಳುತ್ತವೆ. ಇದೇ ನಮ್ಮ ಮನಸ್ಸು. ಆದರೆ ಈ ಮನಸ್ಸು ಎಲ್ಲಿದೆ? ಈ ಪ್ರಶ್ನೆ ಎಲ್ಲರಲ್ಲೂ ಒಂದು ಸಹಜ ಕುತೂಹಲ ಹುಟ್ಟಿಸಿರುತ್ತದೆ.

ನಮ್ಮ ಅರಿವಿಗೆ ಬಾರದಂತೆ ಹಲವು ಸಂದರ್ಭಗಳಲ್ಲಿ ಮಾತನಾಡುವಾಗ ‘ನಾನು’ ಎಂದು ಒತ್ತಿ ಹೇಳಬೇಕಾದರೆ, ನಮ್ಮ ಎದೆಯನ್ನು ಮುಟ್ಟಿ ತೋರಿಸುತ್ತೇವೆ. ತಲೆಯನ್ನಾಗಲಿ, ಕಣ್ಣನ್ನಾಗಲಿ, ಕಿವಿಯನ್ನಾಗಲಿ, ಕಾಲನ್ನಾಗಲಿ ಅಥವಾ ಇನ್ನಾವ ದೇಹದ ಭಾಗವನ್ನು ನಾವು ಮುಟ್ಟಿ ತೋರಿಸುವುದಿಲ್ಲ. ಇದಕ್ಕೆ ಕಾರಣವೇನು? ಇದಕ್ಕೆ ಉತ್ತರ ಹುಡುಕುವುದು ಕಷ್ಟ ಸಾಧ್ಯ. ರಮಣ ಮಹರ್ಷಿಗಳು ಇದಕ್ಕೆ ತಮ್ಮದೇ ಆದ ವ್ಯಾಖ್ಯಾನವನ್ನು ನೀಡಿದ್ದಾರೆ. ಎದೆಯ ಮಧ್ಯದ ಭಾಗದಿಂದ ಎರಡು ಬೆರಳುಗಳ ಬಲಕ್ಕೆ ನಮ್ಮ ಮನಸ್ಸು ಒಂದು ಕೆಳಮುಖವಾದ ಸಾವಿರಕೋಟಿ ದಳದ ಪದ್ಮದ ಮೊಗ್ಗಿನ ಆಕಾರದಲ್ಲಿ ಅಡಗಿದೆ ಹಾಗೂ ಈ ಮನಸ್ಸಿನ ಮುಂದೆ ಅಹಂಕಾರವಿದೆ, ಅದರ ಹಿಂದೆ ಆತ್ಮ ಅಡಗಿದೆ ಮತ್ತು ಆ ಸಾವಿರಕೋಟಿ ದಳದ ಪದ್ಮವೆ ನಮ್ಮ ಆಧ್ಯಾತ್ಮಿಕ ಹೃದಯ. ಎದೆಯ ಮಧ್ಯಭಾಗದಿಂದ ಎರಡು ಬೆರಳುಗಳ ಬಲಕ್ಕೆ ಪಾರಮಾರ್ಥಿಕ ಹೃದಯ ಹಾಗೂ ಎರಡು ಬೆರಳುಗಳ ಎಡಕ್ಕೆ ರಕ್ತ ಚಾಲನೆ ನಡೆಸುವ ಭೌತಿಕ ಹೃದಯವಿದೆ ಎಂದು ಹೇಳಿದ್ದಾರೆ. ಬನ್ನಿ ನಾವೀಗ ಮನಸ್ಸಿನ ಒಳಹೊಕ್ಕು ಕೆಲವು ಕಟ್ಟುಸತ್ಯಗಳ ದರ್ಶನ ಮಾಡೋಣ.
ಆಲೋಚನೆ ಮತ್ತು ಭಾವನೆಗಳ ನಡುವಿನ ಸಂಬಂಧ
ನಾವು ಅಥವಾ ನಮ್ಮ ಅಸ್ಥಿತ್ವ ಇವೆಲ್ಲವೂ ನಾವು ಯಾವ ರೀತಿ ವರ್ತಿಸುತ್ತೇವೆ, ವ್ಯವಹರಿಸುತ್ತೇವೆ ಹಾಗೂ ನಮ್ಮ ವಾಕ್ ಕೌಶಲ್ಯಗಳ ಮೇಲೆ ಅವಲಂಬಿತವಾಗಿದ್ದು, ಹಲವು ಬಾರಿ ಬುದ್ದಿ ಒಂದು ಹೇಳಿದರೆ, ನಮ್ಮ ಮನಸ್ಸು ಬೇರೆ ರೀತಿಯಲ್ಲೇ ವರ್ತಿಸುತ್ತದೆ. ಇಂತಹ ಸನ್ನಿವೇಷಗಳಲ್ಲಿ ನಾವು ಯಾವ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ ಎಂಬುದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಈ ವಿಷಯದಲ್ಲಿ ನಮಗೆ ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾದ, ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿಶಾಲ ದೃಷ್ಟಿಯ ಸಂಕೇತವಾಗಿ ಪರಿಗಣಿತರಾಗಿರುವ ಸ್ವಾಮಿ ವಿವೇಕಾನಂದರು ಹೇಳಿರುವ ಮಾತುಗಳು ನನಗೆ ಇಲ್ಲಿ ನೆನೆಪಿಗೆ ಬರುವುದಲ್ಲದೆ, ಬಹಳ ಅರ್ಥಪೂರ್ಣವೆನ್ನಿಸುತ್ತದೆ.”ಹೃದಯ ಮತ್ತು ಮೆದುಳಿನ ನಡುವಿನ ಸಂಘರ್ಷದಲ್ಲಿ , ನೀವು ಹೃದಯವನ್ನು ಅನುಸರಿಸಿ” ಎಂದು ಅವರು ಸಮಾಜಕ್ಕೆ ಸಂದೇಶ ನೀಡುವುದರ ಮೂಲಕ ಹೃದಯ ಮತ್ತು ಮನಸ್ಸಿನ ವಿಚಾರದಲ್ಲಿ ಒಂದು ಹೊಸ ಆಯಾಮವನ್ನೇ ನೀಡಿದ್ದಾರೆ. ಅಲ್ಲದೇ, ಮನಸ್ಸಿನ ಪರಿಣತಿಯ ಬಗ್ಗೆ ಅವರು ಮಾತನಾಡುತ್ತಾ, ಮನಸ್ಸನ್ನು ನಾವು ಎಷ್ಟು ಶಿಸ್ತುಬದ್ದರಾಗಿಸುತ್ತೀವೋ, ಅಷ್ಟೇ ಮಟ್ಟಿನ ಜ್ಞಾನದ ಮೌಲ್ಯವನ್ನು ನಾವು ಅರಿಯಬಹುದು ಎಂದು ಹೇಳಿದ್ದಾರೆ.

ಮನಷ್ಯನ ಮನಸ್ಸು ಮತ್ತು ಆತನ ಸ್ವಭಾವಗಳು:
ಮಾನವನ ಸ್ವಭಾವವು ಅವನ ಮನಸ್ಸಿಗೆ ಸಂಬಂಧಿಸಿರುತ್ತದೆ; ಆದುದರಿಂದ ಅವನ ಸ್ವಭಾವ ದೋಷಗಳ ವಿಚಾರ ಮಾಡುವುದಕ್ಕಿಂತ ಮೊದಲು ಆತನ ಮನಸ್ಸು ಯಾವ ರೀತಿ ಯೋಚಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ತುಂಬ ಅವಶ್ಯಕವಾಗಿದೆ. ಮನಸ್ಸು ಒಂದು ಸ್ವರೂಪವಾಗಿದ್ದು, ಅದರಲ್ಲಿ ಒಳ್ಳೆಯ ವಿಚಾರ, ಕೆಟ್ಟ ವಿಚಾರ, ಇಚ್ಛೆ, ವಾಸನೆ ಮತ್ತು ಭಾವನೆಗಳೆಂಬ ಪುಚ್ಛಾನುಪುಂಚ ಆಕರಗಳಿರುತ್ತದೆ. ಮನಸ್ಸು ಚಂಚಲವಾಗಿದ್ದು. ‘ಏನು ಮಾಡಬೇಕು ಅಥವಾ ಏನು ಮಾಡಬಾರದು’ ಎಂಬ ವಿಚಾರಗಳು ಸತತವಾಗಿ ಮನಸ್ಸಿನ ಚಿಂತನೆಗೆ ಬರುತ್ತಿರುತ್ತವೆ, ಆದರೆ ಅದಕ್ಕೆ ಸರಿಯಾದ ನಿರ್ಣಯ ತೆಗೆದುಕೊಳ್ಳುವುದು ಒಬ್ಬ ಯೋಗ್ಯ ಮನಸ್ಕನ ಆದ್ಯ ಕರ್ತವ್ಯವಾಗಿರುತ್ತದೆ.
ಆಧುನಿಕ ಮನಃಶಾಸ್ತ್ರಕ್ಕನುಸಾರ ಮನಸ್ಸಿನ ವಿಧಗಳು

ಮನಸ್ಸಿನ ಎರಡು ಭಾಗಗಳಿರುತ್ತವೆ ಎಂಬುದು ಹಲವರಿಗೆ ಗೊತ್ತಿಲ್ಲದ ಸಂಗತಿಯಾಗಿದ್ದು, ನಾವು ಹಲವು ಬಾರಿ ಉಲ್ಲೇಖಿಸುವ ಮನಸ್ಸೆಂದರೆ ‘ಬಾಹ್ಯಮನಸ್ಸು’ ಮತ್ತು ನಾವು ಉಲ್ಲೇಖಿಸಿದ ಮತ್ತೋಂದು ಮನಸ್ಸೆಂದರೆ, ಅದು ಅಂತರ್ಮನಸ್ಸು ಅಂದರೆ ‘ಚಿತ್ತ’. ಮನಸ್ಸಿನ ರಚನೆ ಮತ್ತು ವಿಚಾರಧಾರೆಯಲ್ಲಿ ಬಾಹ್ಯಮನಸ್ಸು ಕೇವಲ ಶೇ. ೧೦ ರಷ್ಟು ಕಾರ್ಯನಿರ್ವಹಿಸಿದರೆ ಮತ್ತು ಅಂತರ್ಮನಸ್ಸು (ಚಿತ್ತ) ಶೇ. ೯೦ ರಷ್ಟು ಚಿಂತನೆ ನಡೆಸುತ್ತದೆ ಎಂಬುದು ಹಲವು ಸಂಶೋಧನೆಗಳಲ್ಲಿ ತಿಳಿದುಬಂದಿದೆ.
ಬಾಹ್ಯಮನಸ್ಸೆಂದರೆ ಜಾಗೃತ ಮನಸ್ಸು ಅರ್ಥಾತ್ ಜಾಗೃತಾವಸ್ಥೆಯಲ್ಲಿನ ಮನಸ್ಸು. ದಿನನಿತ್ಯದ ವಿಚಾರ ಮತ್ತು ತ್ವರಿತವಾಗಿ ಉಂಟಾಗುವ ಭಾವನೆಗಳಿಗೆ ಸಂಬಂಧಿಸಿರುತ್ತವೆ. ಅಂತರ್ಮನಸ್ಸೆಂದರೆ ಆಧ್ಯಾತ್ಮಿಕ ಪರಿಭಾಷೆಯಲ್ಲಿ ‘ಚಿತ್ತ’ ಎಂದು ಕರೆಯುತ್ತಾರೆ. ಎಲ್ಲ ಭಾವ-ಭಾವನೆಗಳ, ವಿಚಾರ-ವಿಕಾರಗಳ ಒಂದು ಗೋದಾಮಾಗಿದ್ದು, ಈ ಗೋದಾಮಿನಲ್ಲಿ ಎಲ್ಲ ರೀತಿಯ ಅನುಭವ, ಭಾವನೆ, ವಿಚಾರ, ಇಚ್ಛೆ-ಅಕಾಂಕ್ಷೆ ಇತ್ಯಾದಿಗಳೆಲ್ಲವೂ ಸಂಗ್ರಹವಾಗಿರುತ್ತವೆ. ಹೀಗಿದ್ದರೂ ಬಾಹ್ಯಮನಸ್ಸಿಗೆ ಇದರ ಬಗ್ಗೆ ಕೊಂಚ ಕಲ್ಪನೆಯು ಇರುವುದಿಲ್ಲ; ಏಕೆಂದರೆ ಅಂತರ್ಮನಸ್ಸು ಮತ್ತು ಬಾಹ್ಯಮನಸ್ಸು ಇವೆರಡರ ಮಧ್ಯದಲ್ಲಿ ಒಂದು ರೀತಿಯ ಪರದೆ ಇರುತ್ತದೆ. ಕೆಲವೊಮ್ಮೆ ಯಾರಾದರೊಬ್ಬ ವ್ಯಕ್ತಿ ಭೇಟಿಯಾದಾಗ, ಅವನನ್ನು ಕೂಡಲೆ ಗುರುತಿಸುತ್ತೇವೆ; ಆದರೆ ಅವನ ಹೆಸರು ನಮಗೆ ನೆನಪಾಗುವುದಿಲ್ಲ. ಇದಕ್ಕೆ ಕಾರಣವೇನೆಂದರೆ ನಮ್ಮ ಬಾಹ್ಯಮನಸ್ಸು ಅವನ ಹೆಸರನ್ನು ಮರೆತಿರುತ್ತದೆ; ಆದರೆ ಕೆಲ ಸಮಯದ ನಂತರ ಅವನ ಹೆಸರು ಒಮ್ಮೆಲೇ ನೆನಪಿಗೆ ಬರುತ್ತದೆ. ಇದಕ್ಕೆ ಕಾರಣವೇನೆಂದರೆ ಅವನ ಹೆಸರನ್ನು ಅಂತರ್ಮನಸ್ಸು ಮರೆತಿರುವುದಿಲ್ಲ ಮತ್ತು ಅಂತರ್ಮನಸ್ಸು ಬಾಹ್ಯಮನಸ್ಸಿಗೆ ನೆನಪಿಸಿ ಕೊಡುತ್ತದೆ. ನಾವು ಹೀಗೆ ‘ಅವನ ಹೆಸರು ನಮಗೆ ಸ್ವಲ್ಪ ಸಮಯದ ನಂತರ ನೆನಪಾಯಿತು’ ಎಂದು ಹೇಳುತ್ತೇವೆ.
ಅಂತರ್ಮನಸ್ಸಿನಲ್ಲಿಯೂ ಕೂಡಾ ಎರಡು ಭಾಗಗಳಿದ್ದು, ಮೊದಲನೆಯದಾಗಿ preconscious mind ಎಂದು ಆಂಗ್ಲ ಭಾಷೆಯಲ್ಲಿ ನಾವು ಇದನ್ನು ಹೆಸರಿಸುತ್ತೇವೆ. ದೇಹ, ಇಂದ್ರಿಯಗಳು, ಮನಸ್ಸು, ಬುದ್ಧಿ ಹಾಗೂ ಅಹಂ ಇವುಗಳ ವೃತ್ತಿ ಮತ್ತು ಕೃತಿಗಳ ಬೇರೆಬೇರೆ ನೆನಪುಗಳು ಬೇರೆಬೇರೆ ಸಂಸ್ಕಾರ ಕೇಂದ್ರಗಳಲ್ಲಿ ಸಂಗ್ರಹವಾಗಿರುತ್ತವೆ ಮತ್ತು ಅವು ವಿಚಾರಗಳ ಸ್ವರೂಪದಲ್ಲಿ ಸತತವಾಗಿ ಪ್ರಕಟವಾಗುತ್ತಿರುತ್ತವೆ. ಹಾಗೆಯೇ ಎರಡನೇಯದಾಗಿ unconscious mind ಎಂಬ ಆಂಗ್ಲ ಅವತರಣಿಕೆಯ ಮತ್ತೋಂದು ಆಕಾರವು ನಮ್ಮ ಇಚ್ಛೆಗನುಸಾರ ಬಾಹ್ಯಮನಸ್ಸಿನಲ್ಲಿ ತರಲು ಆಗುತ್ತದೆ. ಇದರಲ್ಲಿ ಎಲ್ಲ ನೆನಪುಗಳ ಸಂಗ್ರಹವಿರುತ್ತದೆ; ಆದರೆ ಅವು ಎಲ್ಲಕ್ಕಿಂತ ಕೆಳಗಿನ ಭಾಗದಲ್ಲಿರುವುದರಿಂದ ನಮಗೆ ಅವುಗಳ ಬಹಳ ನೆನಪಿರುವುದಿಲ್ಲ ಮತ್ತು ನಮ್ಮ ಇಚ್ಛೆಗನುಸಾರ ಅವುಗಳನ್ನು ಬಾಹ್ಯ ಮನಸ್ಸಿನಲ್ಲಿ ತರಲಾಗುವುದಿಲ್ಲ; ಆದರೆ ವಿಶಿಷ್ಟ ಪ್ರಸಂಗದಿಂದಾಗಿ ಅಥವಾ ಘಟನೆಯಿಂದಾಗಿ ಅಂತರ್ಮನಸ್ಸಿನ ಆಳದಲ್ಲಿರುವ ನೆನಪುಗಳು ಪುನಃ ಬಾಹ್ಯ ಮನಸ್ಸಿನಲ್ಲಿ ಗೋಚರವಾಗುತ್ತ ಹೋಗುತ್ತವೆ.
ಅನಾವಶ್ಯಕ ವಿಚಾರಗಳ ಬಗ್ಗೆ ಮನಸ್ಸಿನ ಸೆಳೆತ ಮತ್ತು ಅದರ ನಿಯಂತ್ರಣ
ಕೆಲವೊಮ್ಮೆ ಯಾವುದಾದರೊಂದು ಪ್ರಸಂಗದಿಂದ ಮನಸ್ಸಿನಲ್ಲಿ ವಿಚಾರಗಳು ಹೆಚ್ಚಾಗುತ್ತವೆ ಮತ್ತು ಹೆಚ್ಚಿನ ಸಲ ಅವು ಅನಾವಶ್ಯಕವಾಗಿರುತ್ತವೆ. ಹೀಗಾದರೆ ಮೊದಲಿನಂತಾಗಲು ಅಥವಾ ಸಕಾರತ್ಮಕರಾಗಿ ಯೋಚಿಸಲು ನಾವು ಯಾವ ರೀತಿ ಪ್ರಯತ್ನಿಸಬೇಕು ಎಂಬುದರ ಬಗ್ಗೆ (ಪೂ.) ಶ್ರೀ. ಸಂದೀಪ ಆಳಶಿ ಯವರು ತಮ್ಮದೇ ರೀತಿಯಲ್ಲಿ ಕೆಳಕಂಡಂತೆ ಅಭಿಪ್ರಾಯ ಮಂಡಿಸಿದ್ದಾರೆ.

ಮನಸ್ಸಿನ ಸ್ಥಿತಿ ನಮ್ಮ ದಿನನಿತ್ಯ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ನನ್ನ ಜೀವನದಲ್ಲಿ ಘಟಿಸಿಸುತ್ತಿರುವ ವಿಚಾರಗಳಿಗೆ ಎಷ್ಟು ಬೆಲೆಯಿದೆ ? ಅಂತಹ ವಿಚಾರಗಳಿಂದ ನನ್ನ ಜೀವನದ ಮೇಲೆ ಏನಾದರೂ ಗುರುತರವಾದ ಪರಿಣಾಮ ಉಂಟಾಗಲಿದೆಯೇ ? ಅಥವಾ ಇದು ತಾತ್ಕಾಲಿಕವೋ ಅಥವಾ ದೀರ್ಘಾವಧಿ ಪರಿಣಾಮ ಬೀರಲಿದೆಯೋ’, ಎಂಬ ಪ್ರಶ್ನೆಗಳಿಗೆ ಉತ್ತರವನ್ನು ನಾವು ನಮ್ಮ ಮನಸ್ಸಿಗೆ ಕೇಳಬೇಕಾಗುತ್ತದೆ. ಹೆಚ್ಚಿನ ಬಾರಿ “ಯಾರೋ ಅನ್ಯ ವ್ಯಕ್ತಿಗಳು ನಮ್ಮೊಂದಿಗೆ ಸರಿಯಾಗಿ ಮಾತನಾಡಲಿಲ್ಲ” ಎಂಬುವ ಕ್ಷುಲ್ಲಕ ವಿಚಾರಗಳಿಗೆ ನಮ್ಮ ಜೀವನದಲ್ಲಿ ಯಾವುದೇ ವಿಶೇಷ ಬೆಲೆ ಇರುವುದಿಲ್ಲ ಅಥವಾ ಅದರಿಂದ ನಮ್ಮ ಜೀವನದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಮತ್ತು ಪರಿಣಾಮ ಆದರೂ, ಅದು ಬಹಳ ತಾತ್ಕಾಲಿಕವಾಗಿರುತ್ತದೆ. ಹೀಗಿದ್ದರೂ ನಾವು ಆ ವಿಚಾರದ ಮೇಲೆ ಮನಸ್ಸಿನ ಚಿಂತನಾ ಶಕ್ತಿಯನ್ನು ಅನಾವಶ್ಯಕವಾಗಿ ಖರ್ಚು ಮಾಡುತ್ತೇವೆ. ಆದರೆ ಯಾವ ವಿಚಾರಗಳಿಗೆ ನಮ್ಮ ಜೀವನದಲ್ಲಿ ಹೆಚ್ಚು ಬೆಲೆಯಿದೆಯೋ ಅದಕ್ಕೆ ನಾವು ನಮ್ಮ ಜೀವನದಲ್ಲಿ ವಿಶೇಷ ಗಮನಕೊಡಬೇಕು ಉದಾ. ನಮ್ಮ ಸಾಧನೆಯ ಜವಾಬ್ದಾರಿ ಇರುವ ಸಾಧಕನು ನಮ್ಮ ಸ್ವಭಾವದೋಷಗಳನ್ನು ಗಮನಕ್ಕೆ ತಂದುಕೊಳ್ಳುವುದು ಮತ್ತು ಅದರ ಮೇಲೆ ಮಾತ್ರ ವಿಚಾರ ಮಾಡುವುದರ ಮೂಲಕ ಗುರಿ ಸಾಧಿಸುವುದು ಅವಶ್ಯವೆನಿಸುತ್ತದೆ ಎಂದು ಅವರು ಹೇಳಿದ್ದಾರೆ.
ನಮ್ಮ ಮನಸ್ಸು ಒಂದು ಸಮಯದಲ್ಲಿ ಒಂದು ಆಲೋಚನೆಯನ್ನು ಮಾತ್ರ ಮಾಡಬಹುದು. ಆದ್ದರಿಂದ, ಸಕಾರಾತ್ಮಕ ಆಲೋಚನೆಗಳ ಮೂಲಕ ಮನಸ್ಸನ್ನು ಕೇಂದ್ರೀಕರಿಸುವ ಮೂಲಕ ಆರಂಭಿಕ ಅನಾವಶ್ಯಕ ವಿಚಾರಗಳಿಂದ ಮನಸ್ಸು ಮುಕ್ತವಾಗಲು ಸಹಾಯವಾಗುತ್ತದೆ. ನಂತರ, ಆಲೋಚನೆಗಳ ಮೂಲ ಸ್ವರೂಪವನ್ನು ಕಂಡುಹಿಡಿಯುವುದರ ಮೂಲಕ ಅದಕ್ಕೆ ಸೂಕ್ತವಾದ ಸ್ವಯಂ-ಸಲಹೆಗಳನ್ನು ರೂಪಿಸಿಕೊಳ್ಳುವುದು ಯೋಗ್ಯವೆನ್ನಿಸುತ್ತದೆ.
ಇನ್ನೂ ಕೆಲವೊಮ್ಮೆ ಕೆಲ ಆಧ್ಯಾತ್ಮಿಕ ವಿಚಾರಗಳಿಂದಲು ಸಮಸ್ಯೆಗಳು ಹೆಚ್ಚಾಗುತ್ತವೆ. ಇಂತಹ ಸಮಯದಲ್ಲಿ ಆ ವಿಚಾರಗಳು ಹೆಚ್ಚು ಸಮಯ ಉಳಿಯದಂತೆ ನೋಡಿಕೊಳ್ಳುವುದು ಅಥವಾ ತಿಳಿದವರಲ್ಲಿ ಅದರ ಬಗ್ಗೆ ವಿಚಾರ ಮಾಡುವುದರ ಮೂಲಕ ಅದನ್ನು ಭಾವಪೂರ್ಣವಾಗಿ ಅರ್ಥೈಸಿಕೊಳ್ಳುವುದು ಉತ್ತಮ
ಮನಸ್ಸು ಶಾಂತವಾಗಿಡಲು ಕೆಲವು ಸರಳ ಸಲಹೆಗಳು ಮತ್ತು ನಮ್ಮ ಮನಸ್ಸನ್ನು ಆಲಿಸಿ ಬದುಕುವ ಕಲಿಕೆ
ನಾವು ನಮ್ಮ ಸ್ವಭಾವದೋಷ ಮತ್ತು ಅಹಂಗಳನ್ನು ಬಿಗಿದಪ್ಪಿಕೊಂಡರೆ ಜೀವನದ ಸವಾಲುಗಳನ್ನು ಎದುರಿಸುವಾಗ ಸಂಘರ್ಷ ಎದುರಿಸಬೇಕಾಗುತ್ತದೆ ಹಾಗೂ ನಮಗೆ ಅವು ಕೆಟ್ಟ ಮತ್ತು ಕ್ಲಿಷ್ಟಕರವೆನ್ನಿಸುತ್ತದೆ. ಅಲ್ಲದೇ ನಾವು ನಕಾರಾತ್ಮಕ ಸ್ಥಿತಿಗೆ (Depression) ತಲುಪುತ್ತೇವೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ನೀರು ಶುಷ್ಕತೆಯಿಂದ ಮಂಜುಗಡ್ಡೆಯಾಗಿ ಗಟ್ಟಿ ಮತ್ತು ಹರಿತವಾಗಿರುತ್ತದೆ; ಆದರೆ ಅದಕ್ಕೆ ಉಷ್ಣತೆ ಸಿಕ್ಕರೆ ಅದು ಕರಗಿ ನೀರಾಗುತ್ತದೆ. ಅದರಂತೆ ನಮ್ಮ ಮನಸ್ಸನ್ನು ಸಕಾರಾತ್ಮಕ ದೃಷ್ಟಿಕೋನದ ಮೂಲಕ ಯೋಚಿಸುವುದರಿಂದ ನಮ್ಮಲ್ಲಿರುವ ಸ್ವಭಾವದೋಷಗಳನ್ನು ಮಂಜುಗಡ್ಡೆ ಕಲ್ಲುಗಳಂತೆ ಬಹಳ ಸುಲಭವಾಗಿ ಕರಗಿಸಬಹುದು.

ನಮ್ಮಲ್ಲಿರುವ ಸ್ವಭಾವದೋಷಗಳಿಂದ ನಮ್ಮಿಂದ ಅನೇಕ ತಪ್ಪುಗಳಾಗುತ್ತಿರುತ್ತವೆ. ಅವುಗಳಿಂದ ನಮಗೆ ಮತ್ತು ಸಮಷ್ಟಿಗೂ ತೊಂದರೆಯಾಗುತ್ತದೆ. ಕೆಲವೊಮ್ಮೆ ನಮ್ಮಲ್ಲಿರುವ ಸ್ವಭಾವದೋಷಗಳಿಂದ ನಮ್ಮ ಮನಸ್ಸಿನ ವಿರುದ್ಧ ಘಟನೆಗಳಾಗುತ್ತವೆ ಮತ್ತು ನಮ್ಮ ಮನಸ್ಸಿಗೆ ನೋವಾಗುತ್ತದೆ. ನಾವು ಅವುಗಳನ್ನು ಮರೆಯಲು ಎಷ್ಟು ಪ್ರಯತ್ನಿಸಿದರೂ ಮರೆಯಲಾಗುವುದಿಲ್ಲ. ನಾವು ದಿನದಲ್ಲಿ ೩೦ ರಿಂದ ೪೦ ನಕಾರಾತ್ಮಕ ವಿಚಾರಗಳನ್ನು ಮಾಡಿ ನಮ್ಮ ಮನಸ್ಸಿಗೆ ನಾವೇ ಚುಚ್ಚುತ್ತಿರುತ್ತೇವೆ. ನಂತರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳ ಕೇಂದ್ರ ವಾಸಿಯಾಗದ ಗಾಯದ ರೂಪದಲ್ಲಿ ನಮಗೆ ತೊಂದರೆಗಳನ್ನು ನೀಡತೊಡಗುತ್ತದೆ. ಆದ್ದರಿಂದ ನಾವು ಶಾಂತ ಚಿತ್ತಿದಿಂದ ಸಮಸ್ಯೆಯ ಹಿನ್ನೆಲೆಗೆ ಪರಿಹಾರವನ್ನು ಹುಡಿಕಿಕೊಂಡಂರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಇದರಿಂದ ಮನಸ್ಸು ತಿಳಿಯಾಗಿ ಒಳ್ಳೆಯ ಆಲೋಚನೆಗಳಿಗೆ ನಾವು ಕಾರ್ಯ ಪ್ರವೃತ್ತರಾಗುತ್ತೇವೆ.
ಮನಸ್ಸು ಒಂದು ಸುಂದರವಾದ ಉದ್ಯಾನವನದಂತೆ. ಅಲ್ಲಿ ಯಾವ ರೀತಿಯ ಆಲೋಚನೆಗಳ ಬೀಜ ಬಿತ್ತುತ್ತೀರೋ ಅಂತಹದ್ದೇ ಬದುಕು ನಿಮ್ಮದಾಗುತ್ತದೆ. ಸಕಾರಾತ್ಮಕತೆಯೇ ಮನಸ್ಸಿನ ಆರೋಗ್ಯದ ಗುಟ್ಟು.
