BlogLove Life

Valentine’s Day (ಪ್ರೇಮಿಗಳ ದಿನ) ಅಂದರೆ ಏನು? ಅದರ ಹಿನ್ನೆಲೆ ಬಗ್ಗೆ ನಿಮಗೆ ಗೊತ್ತೆ?

ಇತ್ತೀಚಿನ ದಶಕಗಳಲ್ಲಿ ಫೆಬ್ರವರಿ, ಅದು ಪ್ರೀತಿಯ ತಿಂಗಳು ಎಂದೇ ಗುರುತಿಸಲ್ಪಡುತ್ತಿದೆ. ಪ್ರೇಮ ನಿವೇದಿಸಲು ಯುವಕ ಯುವತಿಯರು ಸಬೂಬು ಕಂಡುಕೊಳ್ಳುವ ವ್ಯಾಲೆಂಟೈನ್ಸ್ ಡೇ, ಅದು ಪ್ರೇಮಿಗಳ ದಿನ. ಆದರೆ ಪ್ರೀತಿ, ಪ್ರೇಮ, ಮೋಹ, ಕಾಮ ಇವೆಲ್ಲ ಪದಗಳ ನಡುವೆ ನಿಜವಾದ ಪ್ರೀತಿ ಏನೆಂಬುದನ್ನು ಹುಡುಕುವುದು ಕಷ್ಟವೇ. ವ್ಯಾಲೆಂಟೈನ್ಸ್ ಡೇ ನಿಜವಾದ ಪ್ರೀತಿ ಅಥವ true loveಗಾಗಿ ಮೀಸಲಾದ ದಿನ ಎಂದು ಆಚರಿಸಲ್ಪಡುತ್ತಿತ್ತು. ಯಾವ ಪ್ರೇಮಿಗಳು ಪ್ರೀತಿಸಿ ಮದುವೆಯಾಗಲು ಬಯಸುತ್ತಿದ್ದರೋ ಅವರಿಗಾಗಿ ಮೀಸಲಿಟ್ಟ ದಿನ ಎಂಬಂತೆ. ಕೆಲವರು ಅದನ್ನು ಮೇಲ್ವರ್ಗದವರ ಸಾಂಪ್ರದಾಯಿಕ ಪ್ರೇಮದ ದಿನವೆಂದೂ valentine’s day ಗುರುತಿಸುತ್ತಿದ್ದರು ಆದರೆ ಅದು ಯಾವಾಗ ಉತ್ಕಟ ಪ್ರಣಯದ ದಿನವಾಯಿತು ಎಂದು ಇಂದಿಗೂ ಯಾರಿಗೂ ಗೊತ್ತಿಲ್ಲ. ಅದರ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ

Valentine's Day Kannada

 

1. ಯಾರು ಈ ಸಂತ ವ್ಯಾಲೆಂಟೈನ್?

ಸಂತ ವ್ಯಾಲೆಂಟೈನ್‌ನ ಹೆಸರಲ್ಲಿ ಆತನನ್ನು ಜ್ಞಾಪಿಸಿಕೊಳ್ಳುವ ದಿನವೇ ವ್ಯಾಲೆಂಟೈನ್ಸ್ ಡೇ ಎಂದು ಪ್ರಖ್ಯಾತವಾದ ದಿನ. ವ್ಯಾಲೆಂಟೈನ್ ಬಗ್ಗೆ ಗೊತ್ತೋ ಇಲ್ಲವೋ ಆದರೆ ಜನ ವ್ಯಾಲೆಂಟೈನ್ಸ್ ಡೇ ಯನ್ನ ಮಾತ್ರ ಬಹಳ ಆಸಕ್ತಿಯಿಂದ ಆಚರಿಸ್ತಾರೆ. ಆಶ್ಚರ್ಯ ಅಂದ್ರೆ ಸೈನ್ಸ್ ವ್ಯಾಲೆಂಟೈನ್ ಜೀವಿಸಿದ್ದು ಕ್ರಿಸ್ತ ಶಕ ಮೂರನೇ ಶತಮಾನದಲ್ಲಿ. ರೋಮನ್ ಸಮಾಜದವನಾಗಿದ್ದ ವ್ಯಾಲೆಂಟೈನ್ ಒಬ್ಬ ಕ್ರೈಸ್ತ ಪಾದ್ರಿ ಯಾಗಿದ್ದ. ಆ ಸಮಯದಲ್ಲಿ ಸಮಾಜದಲ್ಲಿ ತಿರಸ್ಕೃತರಾಗಿದ್ದ ನವಕ್ರೈಸ್ತರ ಪರ ಆತ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಹೊಸದಾಗಿ ಕ್ರೈಸ್ತರಾದವರು ಬೇರೆ ಮತದವರನ್ನು ಮದುವೆಯಾಗಲೊ ಅಥವಾ ಮದುವೆಯಾದ ಮೇಲೋ ತೊಂದರೆ ಅನುಭವಿಸಿದಾಗ ಅವರಿಗೆ ಆಶ್ರಯವನ್ನೂ ಇತ್ತು ಅವರ ನಡುವಿನ ಪ್ರೀತಿಯನ್ನೂ ಪೋಷಿಸಿ ರಕ್ಷಿಸುತ್ತಿದ್ದ ಎಂಬ ನಂಬಿಕೆ ಇದೆ. ಆದರೆ ಇದೆಲ್ಲ ನಡೆಯಿತೋ ಇಲ್ಲವೋ ಎಂಬ ಬಗ್ಗೆ ಪುರಾವೆ ಕ್ರೈಸ್ತಧರ್ಮದ ಇತಿಹಾಸಕಾರರಲ್ಲಿಯೇ ಇಲ್ಲ. ಇನ್ನೊಂದು ಕಥೆಯ ಪ್ರಕಾರ ಮೂರನೇ ಶತಮಾನದಲ್ಲಿ ಸೈನ್ಸ್‌ ವ್ಯಾಲೆಂಟೈನ್ ಜೀವಿಸಿದ್ದ ಸಮಯದಲ್ಲಿರೋಮನ್ ಚಕ್ರವರ್ತಿ ಕ್ಲಾಡಿಯಸ್ ಒಂದು ವಿಕೃತ ಆದೇಶ ಹೊರಡಿಸಿದ್ದ. ಆತನ ಪ್ರಕಾರ ಅವಿವಾಹಿತ ಸೈನಿಕರು ಬಹಳ ಪರಾಕ್ರಮದಿಂದ ಹೋರಾಡುವ ಕಾರಣದಿಂದಾಗಿ ಯುವಕರು ವಿವಾಹವಾಗುವುದನ್ನು ಆತ ನಿಷೇಧಿಸಿದ್ದ. ಆಗ ಆ ಆಜ್ಞೆ ನ್ಯಾಯಯುತವಾದುದ್ದಲ್ಲವೆಂದು ಆನಿಸಿ ಪಾದ್ರಿ ವ್ಯಾಲೆಂಟೈನ್ ಮದುವೆಯಾಗಲು ಬಯಸಿದ ಪ್ರೇಮಿಗಳನ್ನುರಹಸ್ಯವಾಗಿ ಮದುವೆ ಮಾಡಿಸುತ್ತಿದ್ದ. ಇದನ್ನು ತಿಳಿದ ಚಕ್ರವರ್ತಿ ವ್ಯಾಲೆಂಟೈನ್ ಅನ್ನು ವಧೆ ಮಾಡಿದ ಎನ್ನಲಾಗುತ್ತದೆ. ಆದರೆ ಇನ್ನು ಕೆಲವರ ಪ್ರಕಾರ ಅದು ಕಟ್ಟು ಕತೆ.

 

A delicious and creative display of heart-shaped cookies spelling 'Be My Valentine' on a beige background.


ಆದರೆ ವ್ಯಾಲೆಂಟೈನ್ ಬಗ್ಗೆ ಇರುವ ಇನ್ನೊಂದು ಕತೆಯಲ್ಲಿ ಮತ್ತಷ್ಟು ರೋಚಕತೆಯಿದೆ. ಆ ಕಥೆಯ ಪ್ರಕಾರ ಹಿಂಸೆ ಅನುಭವಿಸುತ್ತಿದ್ದ ನವಕ್ರೈಸ್ತರಿಗೆ ವ್ಯಾಲೆಂಟೈನ್ ರಕ್ಷಣೆ ನೀಡುತ್ತಿದ್ದ ಕಾರಣಕ್ಕಾಗಿ ಆತ ಜೈಲು ಪಾಲಾಗಿದ್ದ. ಜೈಲಿನಲ್ಲಿದ್ದಾಗ ಈ ಪಾದ್ರಿ ವ್ಯಾಲೆಂಟೈನ್ ಜೈಲಿನ ಉಸ್ತುವಾರಿ ಅಧಿಕಾರಿಯ ಮಗಳನ್ನು ಪ್ರೀತಿಸತೊಡಗಿದ. ಆದರೆ ಅವನನ್ನು ರಾಜಾಜ್ಞೆಯ ಪ್ರಕಾರ ಸಾಯಿಸುವ ಮೊದಲು ಆತ ತನ್ನ ಪ್ರೇಯಸಿಗೆ ‘ಇದು ನಿನ್ನ ವ್ಯಾಲೆಂಟೈನ್ ನಿಂದ’ (From your Valentine) ಎಂಬ ಸಂದೇಶ ಬರೆದು ಪ್ರಾಣ ಬಿಟ್ಟ. ಅಂದಿನಿಂದ ಆ ಸಂದೇಶ ಅಮರವಾಗಿದೆ ಎನ್ನುತ್ತಾರೆ.

2. ಪ್ರೀತಿ ಮತ್ತು ಸಮಾಜದ ದ್ವಂದ್ವ ನಿಲುವು

ಇಲ್ಲಿರುವ ವಿಷಯವೇನೆಂದರೆ ಅದು ಕಾಳಿದಾಸನ ಕೃತಿಗಳಲ್ಲೇ ಆಗಲಿ ಶೇಕ್ಸ್ ಪಿಯರ್ ನ ಸಾಹಿತ್ಯವೇ ಆಗಲಿ ಇಲ್ಲ ವ್ಯಾಲೆಂಟೈನ್ ಜೀವಿಸಿದ್ದ ಮೂರನೇ ಶತಮಾನವೇ ಆಗಿದ್ದಿರಲಿ ಪ್ರೀತಿ ಮದುವೆ ಇದೆಲ್ಲ ಅಷ್ಟು ಸುಲಭದ ವಿಷಯಗಳಾಗಿರಲಿಲ್ಲ. ಇಂದಿಗೂ ಪ್ರೀತಿ ಪ್ರೇಮ ಏನೆಂಬ ಸ್ಪಷ್ಟತೆ ಇಲ್ಲದಿದ್ದರೂ ಕೋಟ್ಯಂತರ ಜನರು ಪ್ರೀತಿ ಪ್ರೇಮದ ಬಲೆಯಲ್ಲಿ ಬಿದ್ದು ತೊಳಲಾಡುವುದು ಹಾಗೇ ಕೆಲವೊಮ್ಮೆ ಅದರಲ್ಲಿ ಸ್ವರ್ಗ ಸುಖವನ್ನು ಅನುಭವಿಸುವುದು ಇದೆಲ್ಲ ಮಾನವನ ಅಸ್ತಿತ್ವದಷ್ಟೇ ಸಹಜ ಸಾಮಾನ್ಯ ಮತ್ತು ನಿಜ. ಆದರೆ ಪ್ರೀತಿಯ ವಿಷಯದಲ್ಲಿ ತಪ್ಪು ಮಾಡುವವಳು ಯಾವಾಗಲೂ ಸ್ತ್ರೀ ಮತ್ತು ಆಕೆಯಲ್ಲಿ ವಿವೇಚನೆ ಮತ್ತು ನಿಷ್ಕರ್ಷೆಯ ಕೊರತೆಯ ದೋಷದಿಂದಾಗಿ ಆಕೆ ಯಾವಾಗಲೂ ಕಷ್ಟವನ್ನು ಅನುಭವಿಸುತ್ತಾಳೆ. ಆದ್ದರಿಂದ ಆಕೆಯನ್ನು ರಕ್ಷಿಸಬೇಕು ಎಂಬ ಪುರುಷ ಪ್ರಧಾನ ಸಮಾಜದ ಮನಸ್ಥಿತಿ ಇಂದು ನಿನ್ನೆಯದಲ್ಲ. ಅದು ಸಾಂಪ್ರದಾಯಿಕ ವಾಗಿ ಕುಟುಂಬಗಳು ಒಪ್ಪಿ ನಡೆಯುವ ಮದುವೆಯಾಗಲಿ ಅಥವ ಲವ್ ಜಿಹಾದ್ ಆರೋಪ ಹೊತ್ತ ಕೂಡುವಿಕೆಯಾಗಲಿ ಯಾವುದೇ ಆದರೂ ಅದರಲ್ಲಿ ಮಹಿಳೆಯ ಅಭಿಪ್ರಾಯಕ್ಕಿಂತ ಸಮಾಜದ ಅಭಿಪ್ರಾಯಕ್ಕೇ ಪ್ರಾತಿನಿಧ್ಯ. ಮಹಿಳೆ ಪ್ರೀತಿಯ ಅಥವ ಭಾವನೆಗಳ ಮೋಸಕ್ಕೆ ಬೀಳುತ್ತಾಳೆ ಮತ್ತು ತನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಾಳೆ ಎನ್ನುವವರು, ಮಹಿಳೆ ತನ್ನ ಭಾವನೆಗಳ ವಿಷಯದಲ್ಲಿ ನಿರ್ಧರಿಸಲು ಸಕ್ಷಮಳು ಎನ್ನುವುದನ್ನು ಹೇಳಲು ಹಿಂಜರಿಯುತ್ತಾರೆ. ಎಂತೆಂಥಾ ಪ್ರೇಮ ‘ಪಾಶದಲ್ಲಿ ಸಿಲುಕಿ ಎಂತೆಂಥಾ ಮದುವೆಯ ಬಂಧನದಲ್ಲಿ ತೊಳಲಾಡಿ ಕೊನೆಗೆ ಯಾರನ್ನೂ ದೂಷಿಸದೆ, ಯಾರ ಸಹಾಯವನ್ನೂ ಯಾಚಿಸದೇ ಹೋರಾಡಿ ತನ್ನ ಜೀವನವನ್ನು ಸವಾಲಿನಂತೆ ಸ್ವೀಕರಿಸಿ ಗೆದ್ದು ಬಂದ ಮಹಿಳೆಯರು ಪ್ರೀತಿ ಪ್ರೇಮದ ವಿಷಯದಲ್ಲಿ ಆದರ್ಶ ವ್ಯಕ್ತಿಗಳಾಗೋದೇ ಇಲ್ಲ.

couple, indian, bridge, traditional clothes, happy, woman, man, love, romantic, romance, lovers, relationship, together, kerala, india, nature, kerala, kerala, kerala, kerala, kerala

 

3. ಮಹಿಳೆ ಮತ್ತು ಪ್ರೀತಿಸುವ ಹಕ್ಕು

ಶತಶತಮಾನಗಳ ನಂತರವೂ ಶಕುಂತಳೆಯ ಕಥೆಯಿಂದ ಹಿಡಿದು ಎಲ್ಲದರಲ್ಲೂ ಮಹಿಳೆ ಪ್ರೀತಿ ನಿವೇದಿಸಲು ಯೋಗ್ಯಳಲ್ಲ ತಾನಾಗಿ ಪ್ರೇಮಿಸಲು ಸಮರ್ಥಳಲ್ಲ ಏನಿದ್ದರೂ ಆಕೆ ಒಂದು ಸೂಕ್ತ ಮದುವೆಗೆ ಮಾತ್ರ ಮೀಸಲು ಎಂಬಂತೆ ಆಕೆಯನ್ನು ಸಾಮಾನ್ಯವಾಗಿ ಕಾಣುವ ಸಮಾಜ. ಈ ವರ್ಷದ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಾದರೂ ಮಹಿಳೆಗೆ ಪ್ರೀತಿಸುವ ಹಕ್ಕು ಎಷ್ಟಿದೆ ಎಂದು ಆಲೋಚಿಸಲು ಮನಸ್ಸು ಮಾಡಿದರೆ ಅದೇ ಒಂದು ಹೊಸ ಆರಂಭ.

4. ಮಾರುಕಟ್ಟೆ ಮತ್ತು ಪ್ರೇಮಿಗಳ ದಿನದ ಹೊಸ ಆಯಾಮ:

ಇಂದು ವ್ಯಾಲೆಂಟೈನ್ಸ್ ಡೇ ಕೇವಲ ಭಾವನೆಗಳ ವಿನಿಮಯಕ್ಕೆ ಸೀಮಿತವಾಗಿಲ್ಲ; ಇದು ಒಂದು ಬೃಹತ್ ಆರ್ಥಿಕ ಚಟುವಟಿಕೆಯಾಗಿಯೂ ಮಾರ್ಪಟ್ಟಿದೆ. ಕೆಂಪು ಗುಲಾಬಿಗಳು, ಚಾಕೊಲೇಟ್‌ಗಳು, ಗ್ರೀಟಿಂಗ್ ಕಾರ್ಡ್‌ಗಳು ಮತ್ತು ದುಬಾರಿ ಉಡುಗೊರೆಗಳ ಮೂಲಕ ಪ್ರೀತಿಯನ್ನು ಅಳೆಯುವ ಸಂಪ್ರದಾಯ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಈ ದಿನವನ್ನು ಅತಿ ಹೆಚ್ಚು ಬಳಸಿಕೊಳ್ಳುತ್ತಿವೆ. ಆದರೆ ನೆನಪಿಡಿ, ಪ್ರೀತಿ ಎನ್ನುವುದು ದುಬಾರಿ ಉಡುಗೊರೆಗಳಲ್ಲಿ ಇರುವುದಿಲ್ಲ; ಬದಲಿಗೆ ಪರಸ್ಪರ ನೀಡುವ ಸಮಯ, ಕಾಳಜಿ ಮತ್ತು ಪ್ರಾಮಾಣಿಕತೆಯಲ್ಲಿ ಅಡಗಿರುತ್ತದೆ. ತೋರಿಕೆಯ ಆಚರಣೆಗಿಂತ ಮನಸಾರೆ ಪ್ರೀತಿಸುವುದು ಈ ದಿನದ ನಿಜವಾದ ಯಶಸ್ಸು.

5. ಡಿಜಿಟಲ್ ಯುಗದಲ್ಲಿ ಪ್ರೀತಿ ಮತ್ತು ಸಂಬಂಧಗಳು:

ಸಾಮಾಜಿಕ ಜಾಲತಾಣಗಳ ಹಾವಳಿ ಹೆಚ್ಚಾದಂತೆ, ಪ್ರೇಮ ನಿವೇದನೆಯ ರೀತಿನೀತಿಗಳೂ ಬದಲಾಗಿವೆ. ಇಂದಿನ ಯುವಜನತೆ ಇನ್‌ಸ್ಟಾಗ್ರಾಮ್ ರೀಲ್ಸ್ ಅಥವಾ ವಾಟ್ಸಾಪ್ ಸ್ಟೇಟಸ್‌ಗಳ ಮೂಲಕ ತಮ್ಮ ಪ್ರೀತಿಯನ್ನು ಜಗತ್ತಿಗೆ ಸಾರಲು ಇಷ್ಟಪಡುತ್ತಾರೆ. ಆದರೆ ಈ ಡಿಜಿಟಲ್ ಪ್ರದರ್ಶನದ ನಡುವೆ ವೈಯಕ್ತಿಕ ಸಂಬಂಧಗಳ ಆಪ್ತತೆ ಮರೆಯಾಗುತ್ತಿದೆಯೇ ಎಂಬ ಆತಂಕವೂ ಇದೆ. ಸಂಬಂಧಗಳಲ್ಲಿ ಸದಾ ಆನ್‌ಲೈನ್ ಇರುವುದಕ್ಕಿಂತ, ಎದುರಾಗಿ ಕುಳಿತು ಮಾತನಾಡುವ ಆ ಮೌನ ಮತ್ತು ಮುಗುಳ್ನಗು ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ತಂತ್ರಜ್ಞಾನ ಎಷ್ಟೇ ಬೆಳೆದರೂ ಪ್ರೀತಿಯಲ್ಲಿರುವ ಆ ಹಳೆಯ ಕಾಲದ ‘ಸ್ಪರ್ಶ’ ಮತ್ತು ‘ನಂಬಿಕೆ’ಗೆ ಎಂದಿಗೂ ಪರ್ಯಾಯವಿಲ್ಲ.

6. ಪ್ರೀತಿ ಎಂದರೆ ಕೇವಲ ಪ್ರಣಯವಲ್ಲ:

ನಾವು ಪ್ರೇಮಿಗಳ ದಿನ ಎಂದ ಕೂಡಲೇ ಕೇವಲ ಯುವ ಜೋಡಿಗಳ ಬಗ್ಗೆ ಯೋಚಿಸುತ್ತೇವೆ. ಆದರೆ ಪ್ರೀತಿ ಎನ್ನುವ ಪದದ ಅರ್ಥ ಬಹಳ ವಿಶಾಲವಾದುದು. ಅದು ತಂದೆ-ತಾಯಿ, ಅಕ್ಕ-ತಂಗಿ, ಗೆಳೆಯ-ಗೆಳತಿಯರ ನಡುವಿನ ಶುದ್ಧ ಸಂಬಂಧವೂ ಆಗಿರಬಹುದು. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸುವುದು, ಪ್ರಾಣಿ-ಪಕ್ಷಿಗಳ ಮೇಲೆ ಕರುಣೆ ತೋರುವುದು ಕೂಡ ಪ್ರೀತಿಯೇ. ಈ ದಿನವನ್ನು ಕೇವಲ ಪ್ರಣಯಕ್ಕೆ ಸೀಮಿತಗೊಳಿಸದೆ, ನಮ್ಮ ಬದುಕಿನಲ್ಲಿ ನಮಗಾಗಿ ಮಿಡಿಯುವ ಪ್ರತಿಯೊಂದು ಜೀವಕ್ಕೂ ಕೃತಜ್ಞತೆ ಸಲ್ಲಿಸುವ ದಿನವನ್ನಾಗಿ ಆಚರಿಸುವುದು ಹೆಚ್ಚು ಸೂಕ್ತ.

7. ಸ್ವಯಂ ಪ್ರೀತಿ (Self-Love) ಅತಿ ಮುಖ್ಯ:

ಬದಲಾಗುತ್ತಿರುವ ಜಗತ್ತಿನಲ್ಲಿ ನಾವು ಇತರರನ್ನು ಪ್ರೀತಿಸುವ ಧಾವಂತದಲ್ಲಿ ನಮ್ಮನ್ನು ನಾವು ಪ್ರೀತಿಸುವುದನ್ನು ಮರೆತುಬಿಡುತ್ತೇವೆ. ವ್ಯಾಲೆಂಟೈನ್ಸ್ ಡೇ ದಿನದಂದು ನಮ್ಮನ್ನು ನಾವು ಗೌರವಿಸಿಕೊಳ್ಳುವುದು ಮತ್ತು ನಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕೂಡ ಪ್ರೀತಿಯ ಒಂದು ಭಾಗವೇ. ನಾವು ನಮ್ಮನ್ನು ಪೂರ್ಣವಾಗಿ ಪ್ರೀತಿಸಿದಾಗ ಮಾತ್ರ ಮತ್ತೊಬ್ಬರನ್ನು ಸಮರ್ಥವಾಗಿ ಪ್ರೀತಿಸಲು ಸಾಧ್ಯ. ಈ ವರ್ಷದ ಪ್ರೇಮಿಗಳ ದಿನದಂದು ಇತರರ ಜೊತೆಗೆ ನಿಮಗೂ ಸ್ವಲ್ಪ ಸಮಯ ಮೀಸಲಿಡಿ, ನಿಮ್ಮ ಸಾಧನೆಗಳನ್ನು ನೀವೇ ಮೆಚ್ಚಿಕೊಳ್ಳಿ; ಏಕೆಂದರೆ ನೀವು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮನ್ನು ಪ್ರೀತಿಸಿದಾಗ ಮಾತ್ರ ಬದುಕು ಸುಂದರವಾಗಿ ಕಾಣುತ್ತದೆ.

ಈ ವರ್ಷದ ವ್ಯಾಲೆಂಟೈನ್ಸ್ ಡೇಗೆ ಒಂದು ಹೊಸ ಅರ್ಥ ನೀಡಿ: ಪ್ರೀತಿ ಎಂಬುದು ಕೇವಲ ಆಕರ್ಷಣೆಯಲ್ಲ, ಅದು ಇಬ್ಬರು ವ್ಯಕ್ತಿಗಳ ನಡುವಿನ ಪರಸ್ಪರ ಗೌರವ. ಈ ದಿನದಂದು ಮಹಿಳೆಯರಿಗೆ ಪ್ರೀತಿಸುವ, ಪ್ರೇಮ ನಿವೇದಿಸುವ ಮತ್ತು ತನ್ನ ಬದುಕಿನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಪೂರ್ಣ ಹಕ್ಕಿದೆ ಎಂದು ಸಮಾಜ ಒಪ್ಪಿಕೊಳ್ಳುವಂತಾದರೆ, ಅದೇ ನಿಜವಾದ ಪ್ರೇಮದ ಸಂಭ್ರಮ. ವ್ಯಾಲೆಂಟೈನ್ಸ್ ಡೇ ಕೇವಲ ಒಂದು ದಿನದ ಆಚರಣೆಯಾಗದಿರಲಿ. ಪ್ರತಿಯೊಬ್ಬ ವ್ಯಕ್ತಿಗೂ, ವಿಶೇಷವಾಗಿ ಮಹಿಳೆಯರಿಗೆ ತಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಗೌರವ ಸಿಕ್ಕಾಗ ಮಾತ್ರ ಸಂತ ವ್ಯಾಲೆಂಟೈನ್‌ನ ತ್ಯಾಗಕ್ಕೆ ನಿಜವಾದ ಅರ್ಥ ಸಿಗುತ್ತದೆ.


ಮುಕ್ತಾಯ:

ಪ್ರೀತಿಯೇ ಬದುಕಿನ ಸಾರ ಒಟ್ಟಾರೆಯಾಗಿ ಹೇಳುವುದಾದರೆ, ವ್ಯಾಲೆಂಟೈನ್ಸ್ ಡೇ ಎಂಬುದು ಕೇವಲ ಕ್ಯಾಲೆಂಡರ್‌ನಲ್ಲಿನ ಒಂದು ದಿನಾಂಕವಲ್ಲ, ಅದು ಮನುಷ್ಯನ ಸಹಜ ಸುಂದರ ಭಾವನೆಗಳ ಆಚರಣೆ. ಕಾಲ ಬದಲಾದಂತೆ ಆಚರಣೆಯ ರೀತಿಗಳು ಬದಲಾಗಿರಬಹುದು, ಆದರೆ ಪ್ರೀತಿಯ ಮೂಲ ಆಶಯವಾದ ‘ಪರಸ್ಪರ ಗೌರವ’ ಮತ್ತು ‘ನಂಬಿಕೆ’ ಎಂದಿಗೂ ಬದಲಾಗಬಾರದು. ಸಾಂಪ್ರದಾಯಿಕ ಕಟ್ಟುಪಾಡುಗಳು ಮತ್ತು ಆಧುನಿಕ ತೋರಿಕೆಯ ನಡುವೆ, ನಿಜವಾದ ಪ್ರೀತಿಯು ಎರಡು ಜೀವಗಳ ನಡುವಿನ ಪ್ರಾಮಾಣಿಕ ಬಂಧವಾಗಿ ಉಳಿಯಲಿ. ಪ್ರೀತಿ ಎನ್ನುವುದು ಒಬ್ಬರನ್ನು ಕಟ್ಟಿಹಾಕುವ ಹಗ್ಗವಾಗದೆ, ಒಬ್ಬರಿಗೊಬ್ಬರು ರೆಕ್ಕೆಗಳಾಗಿ ಬೆಳೆಯಲು ಪ್ರೇರಣೆಯಾಗಲಿ. ಈ ಪ್ರೇಮಿಗಳ ದಿನವು ಕೇವಲ ಒಬ್ಬ ವ್ಯಕ್ತಿಗಷ್ಟೇ ಸೀಮಿತವಾಗದೆ, ಇಡೀ ಜಗತ್ತನ್ನು ಪ್ರೀತಿ, ಕರುಣೆ ಮತ್ತು ಮಾನವೀಯತೆಯಿಂದ ನೋಡುವ ವಿಶಾಲ ಮನೋಭಾವವನ್ನು ನಮ್ಮಲ್ಲಿ ಬೆಳೆಸಲಿ

Leave a Reply

Your email address will not be published. Required fields are marked *