ಬಡತನಕ್ಕೆ ಮತ್ತೊಂದು ಶಾಪ ಮುಟ್ಟಿನ ದಾರಿತ್ರ್ಯ
🩸 ಬಡತನಕ್ಕೆ ಮತ್ತೊಂದು ಶಾಪ ‘ಮುಟ್ಟಿನ ದಾರಿದ್ರ್ಯ’: ಬಡ ಮಹಿಳೆಯರ ಮೌನ ರೋಧನೆ | menstrual hygiene in kannada
ವಿಜಯಸೂರ್ಯ ಇನ್ಫೋ ಓದುಗರಿಗೆ ನಮಸ್ಕಾರ. ಭಾರತವು ಇಂದು ತಂತ್ರಜ್ಞಾನದಲ್ಲಿ ಜಗತ್ತೇ ಬೆರಗಾಗುವಂತೆ ಮುಂದುವರಿದಿದೆ. ನಮ್ಮ ಆಲೋಚನೆಗಳು ‘ಡಿಜಿಟಲ್’ ಮತ್ತು ‘ಸ್ಮಾರ್ಟ್’ ಆಗುತ್ತಿವೆ. ಆದರೆ, ಇಷ್ಟೆಲ್ಲಾ ಪ್ರಗತಿಯ ನಡುವೆಯೂ “ಮುಟ್ಟು” (Menstruation) ಎಂಬ ನೈಸರ್ಗಿಕ ಪ್ರಕ್ರಿಯೆಯು ಬಡ ಹೆಣ್ಣುಮಕ್ಕಳ ಪಾಲಿಗೆ ವರವೋ ಅಥವಾ ಶಾಪವೋ ಎಂಬ ದ್ವಂದ್ವದ ನಡುವೆಯೇ ಉಳಿದುಹೋಗಿದೆ. ನಗರದ ದೊಡ್ಡ ದೊಡ್ಡ ಕಟ್ಟಡಗಳ ನೆರಳಲ್ಲೇ ಇರುವ ಕೊಳಗೇರಿಗಳಾಗಲಿ ಅಥವಾ ದೂರದ ಹಳ್ಳಿಗಳಾಗಲಿ, ಅಲ್ಲಿನ ಹೆಣ್ಣುಮಕ್ಕಳಿಗೆ ಆಧುನಿಕ ಸೌಲಭ್ಯಗಳು ಇಂದಿಗೂ ಗಗನಕುಸುಮ. ಅಭಿವೃದ್ಧಿಯ ಮಿನುಗಿನ ನಡುವೆ, ಸೌಲಭ್ಯ ವಂಚಿತರ ಸಾಲಿನಲ್ಲಿ ನಿಂತಿರುವ ಬಡ ಹೆಣ್ಣುಮಕ್ಕಳ ನೋವಿನ ದನಿಯನ್ನು ಕೇಳಿಸಿಕೊಳ್ಳುವವರು ತೀರಾ ವಿರಳ. ಪ್ರತಿ ತಿಂಗಳ ಆ ಮೂರು ದಿನಗಳಲ್ಲಿ ರಾಜ್ಯದ ಬಡ ವರ್ಗದ ಮಹಿಳೆಯರು ಎದುರಿಸುತ್ತಿರುವ ನೈರ್ಮಲ್ಯದ ಕೊರತೆ, ಆರ್ಥಿಕ ಮುಗ್ಗಟ್ಟು ಮತ್ತು ಸಾಮಾಜಿಕ ಮುಜುಗರದ ಕಟು ವಾಸ್ತವಗಳನ್ನು ತೆರೆದಿಡುವ ಒಂದು ಸಣ್ಣ ಪ್ರಯತ್ನವೇ ಈ ಲೇಖನ. menstrual hygiene in kannada
📑 ಈ ಲೇಖನದಲ್ಲಿ ಏನಿದೆ?
- ಕೊಳಗೇರಿ ಮತ್ತು ಬೀದಿಬದಿ ಮಹಿಳೆಯರ ವಾಸ್ತವ ಕಥೆಗಳು
- ಗ್ರಾಮೀಣ ಭಾರತದಲ್ಲಿ ಮುಟ್ಟಿನ ಸಂಪ್ರದಾಯ ಮತ್ತು ಆರೋಗ್ಯ ಅಪಾಯ
- ಸರ್ಕಾರದ ಯೋಜನೆಗಳ ವಾಸ್ತವ ಮತ್ತು ಸುಧಾರಣಾ ಸಲಹೆಗಳು
- ಮುಟ್ಟಿನ ಸಮಯದ ಆಹಾರ ಕ್ರಮ
- ವ್ಯಾಯಾಮ ಮತ್ತು ವೈದ್ಯರನ್ನು ಭೇಟಿ ಮಾಡಬೇಕಾದ ಸಂದರ್ಭಗಳು
- ಮಿಥ್ಯೆ vs ಸತ್ಯ
- ನೈರ್ಮಲ್ಯ ಚೆಕ್‌ಲಿಸ್ಟ್ ಮತ್ತು ವಿಶೇಷ ಸಲಹೆಗಳು
- ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)
ನನ್ನ ಅನುಭವದ ಮಾತು: ಸಂವೇದನೆ ಸಮಾಜದ ಹೊಣೆ
ಈ ಲೇಖನವನ್ನು ಸಿದ್ಧಪಡಿಸುವಾಗ ಮನಸ್ಸಿಗೆ ತಟ್ಟಿದ ಅತಿ ದೊಡ್ಡ ವಿಷಯವೆಂದರೆ ‘ಅಸಹಾಯಕತೆ’. ಜೆ.ಪಿ. ನಗರದ ಕೊಳಗೇರಿಯ ಶ್ವೇತಾ ಅಥವಾ ಜಯನಗರದ ಬೀದಿಯಲ್ಲಿ ಓಲೆ ಮಾರುವ ರಮಾ ಭಾಯಿ – ಇವರಿಗೆ ಪ್ಯಾಡ್ ಕೊಳ್ಳುವುದು ಒಂದು ಐಷಾರಾಮಿ ಕನಸು. “ಮಕ್ಕಳ ಹೊಟ್ಟೆಗೆ ಹಿಟ್ಟು ತರಬೇಕೋ ಅಥವಾ ಪ್ಯಾಡ್ ಕೊಳ್ಳಬೇಕೋ?” ಎಂಬ ಅವರ ಪ್ರಶ್ನೆ ಇಡೀ ಸಮಾಜಕ್ಕೇ ಎಸೆದ ಸವಾಲು. ಮುಟ್ಟು ಎಂಬುದು ನೈಸರ್ಗಿಕ ವರವೇ ಹೊರತು ಶಾಪವಲ್ಲ. ಆದರೆ ಸೌಲಭ್ಯಗಳ ಕೊರತೆ ಅದನ್ನು ಶಾಪವನ್ನಾಗಿ ಮಾಡಿದೆ.
![]()
🏚️ ಕೊಳಗೇರಿಯ ಕಟು ವಾಸ್ತವ: ಸ್ವಚ್ಛತೆಗೂ ಇಲ್ಲಿ ಸಂಘರ್ಷ!
ಮುಟ್ಟಿನ ಸಮಯದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದು ಪ್ರತಿಯೊಬ್ಬ ಹೆಣ್ಣಿಗೂ ತಿಳಿದಿದೆ. ಸೇವಿಸುವ ಆಹಾರದಿಂದ ಹಿಡಿದು ಬಳಸುವ ಬಟ್ಟೆಯವರೆಗೆ ಪ್ರತಿಯೊಂದರಲ್ಲೂ ಶುಚಿತ್ವ ಇರಬೇಕು ಎಂಬುದು ವೈದ್ಯಕೀಯ ಸಲಹೆ. ಆದರೆ, ಬೆಂಗಳೂರಿನ ಜೆ.ಪಿ. ನಗರದಂತಹ ಪ್ರದೇಶದ ಕೊಳಗೇರಿಗಳಲ್ಲಿ ವಾಸಿಸುವ ಹೆಣ್ಣುಮಕ್ಕಳಿಗೆ ಈ ‘ಸ್ವಚ್ಛತೆ’ ಎಂಬುದು ಬರೀ ಕನಸಿನ ಮಾತು.
ಇಲ್ಲಿನ ನಿವಾಸಿ ಶ್ವೇತಾ ಅವರ ಮಾತುಗಳಲ್ಲಿ ಹೇಳುವುದಾದರೆ, “ಬಟ್ಟೆಯ ಬದಲು ಪ್ಯಾಡ್ ಬಳಸಿ ಎಂದು ಅರಿವು ಮೂಡಿಸಲು ಅನೇಕರು ಬರುತ್ತಾರೆ. ಆದರೆ ನಮ್ಮ ಸ್ಲಂ ಒಳಗೆ ಒಂದು ಮೆಡಿಕಲ್ ಶಾಪ್ ಇಲ್ಲ, ಇರುವ ಪುಟ್ಟ ಅಂಗಡಿಗಳಲ್ಲಿ ಪ್ಯಾಡ್‌ಗಳು ಸಿಗುವುದಿಲ್ಲ. ದೂರದ ಅಂಗಡಿಗೆ ಹೋಗಿ ತರುವಷ್ಟು ಹಣವಾಗಲಿ, ಅನುಕೂಲವಾಗಲಿ ನಮ್ಮಲ್ಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಮನೆಯಲ್ಲಿರುವ ಹಳೆಯ ಬಟ್ಟೆಯನ್ನೇ ಅವಲಂಬಿಸಬೇಕಾಗಿದೆ.”
![]()
ಕೇವಲ ಪ್ಯಾಡ್ ಮಾತ್ರವಲ್ಲ, ಮೂಲಭೂತ ಅವಶ್ಯಕತೆಯಾದ ನೀರಿನ ಸಮಸ್ಯೆ ಇಲ್ಲಿನ ಹೆಣ್ಣುಮಕ್ಕಳನ್ನು ಮತ್ತಷ್ಟು ಹೈರಾಣಾಗಿಸಿದೆ. ಇಲ್ಲಿನ ಟ್ಯಾಂಕ್‌ಗೆ ನೀರು ಬರುವುದೇ ಮೂರು ದಿನಕ್ಕೊಮ್ಮೆ. ಕುಡಿಯುವ ನೀರಿಗೇ ಪರದಾಡುವಾಗ, ಮುಟ್ಟಿನ ಸಮಯದಲ್ಲಿ ದಿನವೂ ಸ್ನಾನ ಮಾಡುವುದು ಇಲ್ಲಿ ಅಸಾಧ್ಯ. “ದಿನಾ ಸ್ನಾನ ಮಾಡುತ್ತೇನೆ ಎಂದರೆ ಮನೆಯಲ್ಲಿ ನಮ್ಮ ಅಮ್ಮನೇ ನನಗೆ ಹೊಡೆಯುತ್ತಾರೆ, ಅಷ್ಟೊಂದು ನೀರಿನ ಅಭಾವ ಇಲ್ಲಿದೆ” ಎಂಬ ಶ್ವೇತಾ ಅವರ ಮಾತುಗಳು ಅಭಿವೃದ್ಧಿಯ ಹೊಳೆಯ ನಡುವೆ ಇರುವ ಅಂಧಕಾರದ ಬದುಕನ್ನು ತೆರೆದಿಡುತ್ತವೆ.
ಮುಟ್ಟಿನ ವೇಳೆಯಲ್ಲಿ ಮಹಿಳೆಯರಿಗೆ ಸಂಬಳ ಸಹಿತ ರಜೆ ಕೊಡಬೇಕು ಎನ್ನುವ ಕೂಗು ಆಗಾಗ ಕೇಳಿ ಬಂದು ಮರೆಯಾಗುತ್ತಿರುತ್ತದೆ. ಆದರೆ ಇದು ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವಂತಹ ಕಂಪನಿಗಳಲ್ಲಿ ಮಾತ್ರವೇ ಕೇಳಿಬಂದ ಕೂಗು ಎನ್ನುವುದನ್ನೂ ನಾವು ಮರೆಯುವಂತಿಲ್ಲ. ನಿತ್ಯದ ಸಂಬಳಕ್ಕಾಗಿ ದುಡಿಯುವವರು, ದೊಡ್ಡ ದೊಡ್ಡ ಕಂಪನಿಗಳಲ್ಲಿ ಹೌಸ್ ಕೀಪರ್‌ಗಳಾಗಿ ಕೆಲಸ ಮಾಡುವ ಹೆಣ್ಣು ಮಕ್ಕಳ ಬಗ್ಗೆ ಯಾರೊಬ್ಬರೂ ಯೋಚಿಸುತ್ತಿಲ್ಲ. ಜಯನಗರ ಫೋರ್ತ್ ಬ್ಲಾಕ್, ಮಲ್ಲೇಶ್ವರಂ, ಚಿಕ್ಕಪೇಟೆಗಳಂತ ಶಾಪಿಂಗ್ ಸೆಂಟರ್ಗಳಲ್ಲಿ ಬಳೆ, ಸರ, ಓಲೆಯಂತ ಸಣ್ಣ ಪುಟ್ಟ ಮಾರಾಟ ಮಾಡಿಕೊಂಡು ಬದುಕುತ್ತಿರುವವರ ಜೀವನವೇ ಒಂದು ವಿಚಿತ್ರವೆನಿಸುತ್ತದೆ. ಅಂತದ್ದರಲ್ಲಿ ಅವರ ಮುಟ್ಟಿನ ದಿನಗಳು ಹೇಗಿರಬಹುದು ಎನ್ನುವುದಕ್ಕೆ ಅವರ ಬಾಯಿಂದಲೇ ಉತ್ತರ ಸಿಕ್ಕಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ರಾಜ್ಯ ಘನ ಸರ್ಕಾರವು ತಿಂಗಳಿಗೆ ಒಂದು ದಿನ ಮುಟ್ಟಿನ ರಜೆಯನ್ನು ಕೆಲಸ ನಿರ್ವಹಿಸುವ ಎಲ್ಲ ವರ್ಗದ ಮಹಿಳೆಯರಿಗೂ ನೀಡಿರುವುದು ಪ್ರಶಂಸನೀಯ ನಿರ್ಧಾರವಾಗಿದೆ. ಸದರಿ ನಡೆಯಿಂದ ಈಗ ಶಾಲಾಕಾಲೇಜುಗಳಲ್ಲೂ ಪ್ರೌಢವಸ್ಥೆಯಲ್ಲಿರುವ ಹೆಣ್ಣುಮಕ್ಕಳಿಗೂ ಕೂಡ ಮುಟ್ಟಿನ ರಜೆ ನೀಡಬೇಕೆಂಬ ಅಭಿಪ್ರಾಯಗಳು ಎಲ್ಲೆಡೆಯಲ್ಲೂ ವ್ಯಕ್ತವಾಗುತ್ತಿದೆ.
🥺 ಹೊಟ್ಟೆಪಾಡಿನ ಅನಿವಾರ್ಯತೆ ಮತ್ತು ‘ಮುಟ್ಟಿನ’ ಚಿತ್ರಹಿಂಸೆ
ಜಯನಗರದ 4ನೇ ಬ್ಲಾಕ್‌ನಲ್ಲಿ ಬಣ್ಣಬಣ್ಣದ ಓಲೆಗಳನ್ನು ಮಾರುವ ಉತ್ತರ ಭಾರತ ಮೂಲದ ರಮಾ ಭಾಯಿ ಅವರ ಬದುಕು ಹೋರಾಟದ ಹಾದಿ. ಅವರ ಊರಲ್ಲಿ ಮುಟ್ಟಿನ ಸಮಯದಲ್ಲಿ ವಿಶ್ರಾಂತಿ ಪಡೆಯುವ ಸಂಪ್ರದಾಯವಿದ್ದರೂ, ಬೆಂಗಳೂರಿನ ಬೀದಿಗಳಲ್ಲಿ ಅದು ಸಾಧ್ಯವಿಲ್ಲದ ಮಾತು.
“ಮನೆಯಲ್ಲಿ ನಾಲ್ಕು ಮಕ್ಕಳಿದ್ದಾರೆ, ಕುಡುಕ ಗಂಡನಿಂದ ಯಾವುದೇ ಸಹಾಯವಿಲ್ಲ. ಮುಟ್ಟಾಗಿದೆ ಎಂದು ನಾನು ಕೆಲಸಕ್ಕೆ ಬರದಿದ್ದರೆ ಅಂದು ನನ್ನ ಮಕ್ಕಳ ಹೊಟ್ಟೆಗೆ ಹಿಟ್ಟಿಲ್ಲದಂತಾಗುತ್ತದೆ” ಎನ್ನುತ್ತಾರೆ ರಮಾ ಭಾಯಿ. ಅವರ ಪಾಲಿಗೆ ಹಣದ ಲೆಕ್ಕಾಚಾರವೇ ದೊಡ್ಡದು. ದಿನವಿಡೀ ಬಿಸಿಲಿನಲ್ಲಿ ನಿಂತು ಮಾರಾಟ ಮಾಡಿದರೆ ಸಿಗುವ ಲಾಭವೇ 200-300 ರೂಪಾಯಿ. “ನೂರಾರು ರೂಪಾಯಿ ಕೊಟ್ಟು ಪ್ಯಾಡ್ ಕೊಳ್ಳುವ ಧೈರ್ಯ ನನಗಿಲ್ಲ, ಆ ಹಣದಲ್ಲಿ ಮಕ್ಕಳಿಗೆ ಊಟ ತರಬಹುದು. ಹಾಗಾಗಿ ನೋವಿದ್ದರೂ ಬಟ್ಟೆ ಕಟ್ಟಿಕೊಂಡೇ ವ್ಯಾಪಾರ ಮಾಡುತ್ತೇನೆ” ಎನ್ನುವುದು ಅವರ ಅಳಲು.
ಬೀದಿ ಬದಿಯಲ್ಲಿ ನಿಂತು ಕೆಲಸ ಮಾಡುವಾಗ ಬಟ್ಟೆ ಬದಲಿಸಲು ಜಾಗವಿಲ್ಲದ ಸ್ಥಿತಿ, ಕಾಡುವ ಹೊಟ್ಟೆನೋವು ಎಲ್ಲವೂ ಅವರಿಗೆ ಚಿತ್ರಹಿಂಸೆಯಂತೆ ಭಾಸವಾಗುತ್ತದೆ. ಆ ಸಮಯದಲ್ಲಿ ಗ್ರಾಹಕರು ಬಂದು ಚೌಕಾಸಿ ಮಾಡಿದಾಗ ಅವರಿಗೆ ಸಿಟ್ಟು ಬಂದರೂ, ಹೊಟ್ಟೆ ಹಸಿವಿನ ಅನಿವಾರ್ಯತೆ ಅವರ ಬಾಯಿ ಮುಚ್ಚಿಸುತ್ತದೆ. “ಸಮಸ್ಯೆಗೆ ಪರಿಹಾರ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ, ಹೆಣ್ಣಾಗಿ ಹುಟ್ಟಿದ ಮೇಲೆ ಇದೆಲ್ಲವನ್ನೂ ಅನುಭವಿಸಲೇಬೇಕು ಅಂದುಕೊಂಡು ಸುಮ್ಮನಾಗುತ್ತೇವೆ” ಎಂಬ ಅವರ ಮಾತುಗಳು ಬಡ ಮಹಿಳೆಯರ ಅಸಹಾಯಕತೆಯನ್ನು ಬಿಂಬಿಸುತ್ತವೆ.
😔 ಸಂಕೋಚ ಮತ್ತು ಆರ್ಥಿಕ ಮುಗ್ಗಟ್ಟಿನ ನಡುವೆ ನಲುಗುತ್ತಿರುವ ಆರೋಗ್ಯ
ನಗರದ ಇನ್ನೋರ್ವ ಬಡ ಯುವತಿಯ ಕಥೆ ಇಂದಿನ ಅನೇಕ ಹೆಣ್ಣುಮಕ್ಕಳ ಗುಪ್ತ ಸಂಕಟಕ್ಕೆ ಕನ್ನಡಿ ಹಿಡಿಯುವಂತಿದೆ. ಕೇವಲ 23 ವರ್ಷದ ಈ ಯುವತಿಗೆ ಮುಟ್ಟಿನ ಚಕ್ರ ಸರಿಯಾಗಿಲ್ಲ; ಒಂದೂವರೆ-ಎರಡು ತಿಂಗಳಿಗೊಮ್ಮೆ ಮುಟ್ಟಾಗುವ ಸಮಸ್ಯೆ. ಒಮ್ಮೆ ಮುಟ್ಟಾದರಂತೂ ವಿಪರೀತ ರಕ್ತಸ್ರಾವ, ವಾರ ಕಳೆದರೂ ನಿಲ್ಲದ ರಕ್ತದ ಓಟ. ದಿನಕ್ಕೆ ಐದಾರು ಪ್ಯಾಡ್ ಬದಲಿಸಬೇಕಾದ ಅನಿವಾರ್ಯತೆ. ಆದರೆ ಇಷ್ಟೆಲ್ಲಾ ದೈಹಿಕ ಯಾತನೆಗಳಿಗಿಂತ ಅವಳನ್ನು ಕಾಡುತ್ತಿರುವುದು ‘ಒಂಟಿತನ’ ಮತ್ತು ‘ಮುಜುಗರ’.
![]()
“ಮನೆಯಲ್ಲಿ ಅಮ್ಮನಿಲ್ಲ, ಅಪ್ಪನಿಗೆ ಇಂತಹ ವಿಷಯಗಳನ್ನು ಹೇಳಿ ಅರ್ಥ ಮಾಡಿಸುವುದು ಹೇಗೆ ಎಂಬುದು ತಿಳಿಯುತ್ತಿಲ್ಲ. ಹೊರಗಿನವರ ಹತ್ತಿರ ಹಂಚಿಕೊಳ್ಳಲು ಅಂಜಿಕೆ,” ಎನ್ನುತ್ತಾಳೆ ಆಕೆ. ಈ ಯುವತಿಯನ್ನು ಕಾಡುತ್ತಿರುವ ಮತ್ತೊಂದು ಬಹುದೊಡ್ಡ ಭಯವೆಂದರೆ ಆಸ್ಪತ್ರೆಯ ಖರ್ಚು. ಸ್ತ್ರೀ ರೋಗ ತಜ್ಞರ ಫೀಸು ದುಬಾರಿ ಎಂಬ ಮಾತುಗಳನ್ನು ಕೇಳಿರುವ ಅವಳಿಗೆ, ತನ್ನ ಆರ್ಥಿಕ ಪರಿಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುವುದು ಅಸಾಧ್ಯದ ಮಾತು ಎಂಬ ಆತಂಕ. ಹೀಗಾಗಿ, ಗಂಭೀರ ಆರೋಗ್ಯ ಸಮಸ್ಯೆಯಿದ್ದರೂ ಯಾರ ಬಳಿಯೂ ಹೇಳಿಕೊಳ್ಳಲಾಗದೆ, ಒಳಗೆಂದೇ ನೋವನ್ನು ನುಂಗುತ್ತಾ ಮೌನಕ್ಕೆ ಶರಣಾಗಿದ್ದಾಳೆ.
ಇದು ಕೇವಲ ಒಬ್ಬ ಯುವತಿಯ ಕಥೆಯಲ್ಲ; ಆರ್ಥಿಕವಾಗಿ ಹಿಂದುಳಿದಿರುವ ಸಾವಿರಾರು ಹೆಣ್ಣುಮಕ್ಕಳು ಸರಿಯಾದ ಮಾಹಿತಿ ಮತ್ತು ಹಣದ ಕೊರತೆಯಿಂದಾಗಿ ತಮ್ಮ ಆರೋಗ್ಯವನ್ನೇ ಬಲಿಕೊಡುತ್ತಿದ್ದಾರೆ.
ನಗರ ಪ್ರದೇಶಗಳ ಸ್ಥಿತಿ ಒಂದಾದರೆ ಹಳ್ಳಿಯದ್ದು ಬೇರೆಯದ್ದೇ ರಾಮಾಯಣವಿದೆ. ಈಗಿನ ಜನಾಂಗವನ್ನು ಬಿಟ್ಟರೆ ಹಿಂದಿನ ಜನಾಂಗದವರಿಗೆ ಈಗಲೂ ಪ್ಯಾಡ್ ಬಳಕೆ ಒಂದು ವಿಸ್ಮಯವೇ. ಹಲವು ಗ್ರಾಮಗಳಲ್ಲಿ ಈಗಿನ ಜನಾಂಗದ ಹೆಣ್ಣು ಮಕ್ಕಳಿಗೂ ಅದು ಅಪರಿಚಿತ ಎನ್ನುವುದನ್ನು ನಾವು ಮರೆಯುವಂತಿಲ್ಲ. ಮುಟ್ಟು ಎನ್ನುವುದು ಅತೀ ಗೌಪ್ಯ ವಿಚಾರವಾಗಿ ಬಿಟ್ಟಿರುತ್ತದೆ. ಮುಟ್ಟಿನ ಸಮಸ್ಯೆಗಳನ್ನು ಸ್ವಂತದವರ ಬಳಿ ಹೇಳಿಕೊಳ್ಳಲೂ ಹಿಂಜರಿಕೆ ಮಾಡುವವರು ನಮ್ಮಲ್ಲಿದ್ದಾರೆ. ಆಸ್ಪತ್ರೆಯ ಮೇಲಿನ ಭಯ, ಗೌಪ್ಯ ವಿಚಾರ ಎನ್ನುವ ಹಿಂಜರಿಕೆ ಅನೇಕ ಮಹಿಳೆಯರ ಸಮಸ್ಯೆಗಳು ಇನ್ನಷ್ಟು ಉಲ್ಬಣವಾಗುವಲ್ಲಿ ಕಾರಣವಾಗಿದೆ.
ಇನ್ನೊಂದು ನಿಟ್ಟಿನಲ್ಲಿ ನೋಡುತ್ತಾ ಹೋದರೆ, ಈಗ ಪ್ಯಾಡ್ ಬಳಕೆಯೂ ಅತಿ ಕಡಿಮೆಯಾಗಲಾರಂಭಿಸಿದೆ. ಟ್ಯಾಂಪೂನ್, ಮೆನ್ಸ್ಟ್ರುವಲ್ ಕಪ್‌ಗಳ ಬಳಕೆ ಹೆಚ್ಚಾಗಿದೆ. ಪ್ಯಾಡ್ನಲ್ಲಿ ಪ್ಲಾಸ್ಟಿಕ್ ಅಂಶ ಹೆಚ್ಚಿರುತ್ತದೆ. ಪ್ರತಿನಿತ್ಯ ದೇಶದಲ್ಲಿ ಕೋಟ್ಯಂತರ ಟನ್ ಪ್ಯಾಡ್ ಕಸವಾಗಿ ಬಂದು ಸೇರುತ್ತಿದೆ. ಇದರ ನಿಯಂತ್ರಣ ಮಾಡಲು ಮೆನ್ಸ್ಟ್ರುವಲ್ ಕಪ್ ಬಳಕೆಗೆ ಒತ್ತು ನೀಡಲಾಗುತ್ತಿದೆ. ಆದರೆ ಇದು ಕೂಡ ಸಾಮಾನ್ಯ ವರ್ಗಕ್ಕೆ ಇನ್ನೂ ಪರಿಚಯವಾಗದ ವಿಚಾರ. ಇನ್ನು ಈ ಮೆನ್ಸ್ಟ್ರುವಲ್ ಕಪ್‌ಗಳು ಬಡ ವರ್ಗಕ್ಕೂ ಸಿಗಬೇಕೆಂದರೆ ದಶಕಗಳು ಉರುಳಬೇಕೇನೋ?
🏘️ ಗ್ರಾಮೀಣ ಭಾರತದಲ್ಲಿ ಮುಟ್ಟು: ಸಂಪ್ರದಾಯದ ಸಂಕೋಲೆ ಮತ್ತು ಅಡಗಿದ ಆರೋಗ್ಯದ ಭೀತಿ
ನಗರಗಳ ಕಥೆ ಒಂದು ಬಗೆಯಾದರೆ, ಹಳ್ಳಿಗಳಲ್ಲಿ ಮುಟ್ಟಿನ ಸುತ್ತಲಿನ “ರಾಮಾಯಣವೇ” ಬೇರೆ. ಅಲ್ಲಿ ಮುಟ್ಟು ಎಂದರೆ ಇಂದಿಗೂ ‘ಮುಟ್ಟಬೇಡ’ ಎಂದೇ ಅರ್ಥ. ಈ ಮೂರ್ನಾಲ್ಕು ದಿನಗಳಲ್ಲಿ ಹೆಣ್ಣುಮಕ್ಕಳು ಎದುರಿಸುವ ಸಾಮಾಜಿಕ ಬಹಿಷ್ಕಾರದಂತಹ ಪರಿಸ್ಥಿತಿ ನಿಜಕ್ಕೂ ಆತಂಕಕಾರಿ.
ಮಡಿ-ಮೈಲಿಗೆಯ ಕಟ್ಟುಪಾಡುಗಳು:
- ಅಸ್ವತಂತ್ರ ಬದುಕು: ಮುಟ್ಟಾದ ತಕ್ಷಣ ಯಾರನ್ನೂ ಮುಟ್ಟುವಂತಿಲ್ಲ, ಬಚ್ಚಲ ಮನೆಯ ಹಂಡೆಯ ನೀರನ್ನೂ ಸ್ವತಃ ತೆಗೆದುಕೊಳ್ಳುವಂತಿಲ್ಲ. ಬೇರೆಯವರು ತೋಡಿ ಕೊಟ್ಟ ನೀರನ್ನೇ ಬಳಸಬೇಕು. ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು ಕೂರುವ ಜಾಗದವರೆಗೆ ಎಲ್ಲವೂ ಬೇರೆಯವರ ನಿರ್ಧಾರಕ್ಕೆ ಬಿಟ್ಟದ್ದು.
- ಮನೆಯ ಮೂಲೆಯೇ ಆಸರೆ: ಈಗಲೂ ಅದೆಷ್ಟೋ ಹಳ್ಳಿಗಳಲ್ಲಿ ಹೆಣ್ಣುಮಕ್ಕಳನ್ನು ಮನೆಯಿಂದ ಹೊರಗಿನ ಗುಡಿಸಲಿನಲ್ಲಿ ಅಥವಾ ಕತ್ತಲೆ ಕೋಣೆಯ ಮೂಲೆಯಲ್ಲಿ ಕೂರಿಸುವ ಪದ್ಧತಿ ಜೀವಂತವಾಗಿದೆ.
![]()
ಬಟ್ಟೆ ಬಳಕೆಯ ಹಿಂದಿರುವ ಅತಿ ದೊಡ್ಡ ಅಪಾಯ: ಹಳ್ಳಿಗಳಲ್ಲಿ ಪ್ಯಾಡ್‌ಗಳ ಬಳಕೆ ಇಂದಿಗೂ ‘ವಿದೇಶಿ ಸಂಸ್ಕೃತಿ’ ಎಂಬಂತೆ ನೋಡಲಾಗುತ್ತದೆ. ಬಹುತೇಕರು ಈಗಲೂ ಕಾಟನ್ ಬಟ್ಟೆಯನ್ನೇ ಅವಲಂಬಿಸಿದ್ದಾರೆ. ಆದರೆ ಇಲ್ಲಿ ಸಮಸ್ಯೆ ಇರುವುದು ಬಟ್ಟೆಯ ಬಳಕೆಯಲ್ಲಿ ಅಲ್ಲ, ಅದರ ನಿರ್ವಹಣೆಯಲ್ಲಿ:
- ಸಂಕುಚಿತ ಮನೋಭಾವ: ಬಳಸಿದ ಬಟ್ಟೆಯನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿದರೆ ಕ್ರಿಮಿಗಳು ಸಾಯುತ್ತವೆ ಎಂಬ ವೈಜ್ಞಾನಿಕ ಸತ್ಯ ಹಿರಿಯರಿಗೆ ತಿಳಿದಿಲ್ಲ. ಯಾರಾದರೂ ನೋಡಿದರೆ ಮರ್ಯಾದೆ ಹೋಗುತ್ತದೆ ಎಂಬ ಭಯ ಮತ್ತು ‘ಮಡಿ’ ಎನ್ನುವ ನಂಬಿಕೆಯಿಂದಾಗಿ, ಆ ಬಟ್ಟೆಗಳನ್ನು ಯಾರಿಗೂ ಕಾಣದ ಕತ್ತಲೆ ಮೂಲೆಯಲ್ಲಿ ಒಣಗಿಸಲಾಗುತ್ತದೆ.
- ಆರೋಗ್ಯಕ್ಕೆ ಕುತ್ತು: ತೇವವಿರುವ, ಸರಿಯಾಗಿ ಒಣಗದ ಅದೇ ಬಟ್ಟೆಯನ್ನು ಮತ್ತೆ ಬಳಸುವುದರಿಂದ ಅಲರ್ಜಿ, ಸೋಂಕು ಮಾತ್ರವಲ್ಲದೆ, ಗರ್ಭಕೋಶಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಕೆಲವೊಮ್ಮೆ ಗರ್ಭಕೋಶವನ್ನೇ ತೆಗೆಯಬೇಕಾದ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ.
🏛️ ಸರ್ಕಾರದ ಯೋಜನೆಗಳು: ಘೋಷಣೆಗಳು ಹಲವು, ತಲುಪಿದ್ದು ಎಷ್ಟು?
ಸರ್ಕಾರವು ಹೆಣ್ಣುಮಕ್ಕಳ ಆರೋಗ್ಯ ಮತ್ತು ಮುಟ್ಟಿನ ನೈರ್ಮಲ್ಯದ ಬಗ್ಗೆ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ ಎನ್ನಲಾಗದು. ಕೆಲವು ಉತ್ತಮ ಯೋಜನೆಗಳಿಗೆ ಮುನ್ನುಡಿ ಬರೆದಿದೆಯಾದರೂ, ಅವುಗಳ ಅನುಷ್ಠಾನದಲ್ಲಿ ಹಿನ್ನಡೆಯಾಗಿದೆ.
ಜಾರಿಯಲ್ಲಿರುವ ಯೋಜನೆ ಮತ್ತು ಸಮಸ್ಯೆಗಳು:
- ಕಡಿಮೆ ಬೆಲೆಯ ಪ್ಯಾಡ್‌ಗಳು: ಸರ್ಕಾರವು ‘ಜನೌಷಧಿ ಕೇಂದ್ರ’ಗಳ ಮೂಲಕ ಕೇವಲ 1 ರೂಪಾಯಿಗೆ ಒಂದು ಪ್ಯಾಡ್ ವಿತರಿಸುವ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ.
- ಅರಿವಿನ ಕೊರತೆ: ದೇಶದ ಶೇ. 80ರಷ್ಟು ಹೆಣ್ಣುಮಕ್ಕಳಿಗೆ ಇಂತಹ ಸೌಲಭ್ಯವೊಂದಿದೆ ಎಂಬ ಮಾಹಿತಿಯೇ ಇಲ್ಲ. ಕೇವಲ ವಿದ್ಯಾವಂತರು ಅಥವಾ ಇಂಟರ್ನೆಟ್ ಸೌಲಭ್ಯ ಉಳ್ಳವರಿಗೆ ಮಾತ್ರ ಈ ವಿಷಯ ತಿಳಿದಿದೆ.
- ಗುಣಮಟ್ಟದ ಕೊರತೆ: ವಿತರಿಸಲಾಗುತ್ತಿರುವ ಪ್ಯಾಡ್‌ಗಳ ಗುಣಮಟ್ಟದ ವಿಚಾರದಲ್ಲಿ ಸರ್ಕಾರ ಸ್ವಲ್ಪ ಎಡವಿರುವುದು ಸತ್ಯ. ಇದರಿಂದಾಗಿ ಮಹಿಳೆಯರು ಇವುಗಳನ್ನು ಬಳಸಲು ಹಿಂಜರಿಯುತ್ತಿದ್ದಾರೆ.
![]()
ಸುಧಾರಣೆಗೆ ಕೆಲವು ಪ್ರಮುಖ ಸಲಹೆಗಳು:
- ಅರಿವಿನ ಕೇಂದ್ರಗಳಾಗಲಿ ಅಂಗನವಾಡಿ: ಅಂಗನವಾಡಿ ಕೇಂದ್ರಗಳಲ್ಲಿ ಮುಟ್ಟಿನ ಸಮಯದ ಆಹಾರ ಪದ್ಧತಿ, ವೈಯಕ್ತಿಕ ನೈರ್ಮಲ್ಯ ಮತ್ತು ದೈಹಿಕ ಬದಲಾವಣೆಗಳ ಬಗ್ಗೆ ಕಾಲಕಾಲಕ್ಕೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
- ವಿತರಣಾ ವ್ಯವಸ್ಥೆಯ ಬದಲಾವಣೆ: ಪ್ಯಾಡ್‌ಗಳನ್ನು ಕೇವಲ ಜನೌಷಧಿ ಕೇಂದ್ರಗಳಿಗೆ ಸೀಮಿತಗೊಳಿಸದೆ, ಪ್ರತಿ ಹಳ್ಳಿಯ ಅಂಗನವಾಡಿಗಳಲ್ಲಿ ಅಥವಾ ಆಶಾ ಕಾರ್ಯಕರ್ತೆಯರ ಮೂಲಕ ನೇರವಾಗಿ ವಿತರಿಸುವ ವ್ಯವಸ್ಥೆಯಾಗಬೇಕು.
- ಕೇವಲ ಪ್ಯಾಡ್ ಸಾಕೇ?: ಆಧುನಿಕ ಮತ್ತು ಸುಸ್ಥಿರ ವಿಧಾನಗಳಾದ ‘ಮೆನ್ಸ್ಟ್ರುವಲ್ ಕಪ್’ (Menstrual Cup) ಗಳ ಬಗ್ಗೆ ಬಡ ಮತ್ತು ಗ್ರಾಮೀಣ ಮಹಿಳೆಯರಿಗೆ ಅರಿವು ಮೂಡಿಸಬೇಕು. ಇದು ದೀರ್ಘಕಾಲದವರೆಗೆ ಆರ್ಥಿಕವಾಗಿ ಅವರಿಗೆ ವರವಾಗಬಲ್ಲದು.
ಹೆಣ್ಣು ಬಡವಿಯಾದರೂ ಮುಟ್ಟಾಗುತ್ತಾಳೆ. ಆದರೆ ಆಕೆಗೆ ಆ ಸಮಯದಲ್ಲಿ ಕನಿಷ್ಠ ಸೌಲಭ್ಯವಾದರೂ ದಕ್ಕುತ್ತಿದೆಯಾ? ಮೂರು ದಿನಕ್ಕೊಮ್ಮೆ ಸ್ನಾನ ಮಾಡಬೇಕಾದ ಅನಿವಾರ್ಯತೆ ಇದ್ದ ಹೆಣ್ಣುಮಕ್ಕಳೂ ನಮ್ಮ ನಡುವೆ ಇದ್ದಾರೆ. ಅವರಿಗೆಲ್ಲ ಸ್ವಚ್ಛತೆ ಗಗನ ಕುಸುಮ. ಪ್ಯಾಡ್ ಅಂತೂ ಕಲ್ಪನೆಗೂ ಮೀರಿದ್ದು!
– ಅನಾಮಿಕ
ಮುಟ್ಟಿನ ದಾರಿದ್ರ್ಯವು ಕೇವಲ ಬಡವರ ಸಮಸ್ಯೆಯಲ್ಲ, ಇದು ಸಮಾಜದ ಸೋಲು. ಹೆಣ್ಣು ಆರೋಗ್ಯವಾಗಿದ್ದರೆ ಮಾತ್ರ ಒಂದು ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ. ಆಕೆಯ ಮೌನವನ್ನು ಮುರಿಯಲು ನಾವು ಧ್ವನಿಯಾಗೋಣ.
– ವಿಜಯ ಸೂರ್ಯ ಇನ್ಫೋ
ಮುಟ್ಟು ಎಂಬುದು ಪ್ರಕೃತಿಯ ವರವೇ ಹೊರತು ಶಾಪವಲ್ಲ. ನಾವು ಬಟ್ಟೆ ಬಳಸಲಿ ಅಥವಾ ಪ್ಯಾಡ್ ಬಳಸಲಿ, ಅಲ್ಲಿ ಅತಿ ಮುಖ್ಯವಾದುದು ನೈರ್ಮಲ್ಯ (Hygiene). ಮುಟ್ಟಾದ ಮಹಿಳೆಯನ್ನು ಕಂಡು ಮೂರಡಿ ದೂರ ಓಡುವುದಕ್ಕಿಂತ, ಆ ಸಮಯದಲ್ಲಿ ಆಕೆಗೆ ಬೇಕಾದ ದೈಹಿಕ ಮತ್ತು ಮಾನಸಿಕ ಅಗತ್ಯಗಳನ್ನು ಪೂರೈಸುವುದು ಸಮಾಜದ ಜವಾಬ್ದಾರಿ. ಆಕೆ ಸುರಕ್ಷಿತಳಾಗಿದ್ದರೆ ಮಾತ್ರ ಒಂದು ಆರೋಗ್ಯವಂತ ಕುಟುಂಬ ಮತ್ತು ಸಮಾಜ ಸಾಧ್ಯ.
🥗 ಮುಟ್ಟಿನ ಸಮಯದಲ್ಲಿ ಯಾವ ಆಹಾರ ಸೇವಿಸಬೇಕು?
ಮುಟ್ಟಿನ ಸಮಯದಲ್ಲಿ ದೇಹದಲ್ಲಿ ರಕ್ತದ ನಷ್ಟವಾಗುವುದರಿಂದ ಕಬ್ಬಿಣಾಂಶ (Iron) ಹಾಗೂ ಪೋಷಕಾಂಶಗಳ ಅವಶ್ಯಕತೆ ಹೆಚ್ಚಾಗುತ್ತದೆ.
ಸೇವಿಸಬಹುದಾದ ಆಹಾರಗಳು:
✅ ಪಾಲಕ್, ನುಗ್ಗೆ ಸೊಪ್ಪು — ✅ ಬೆಲ್ಲ ಮತ್ತು ಎಳ್ಳು — ✅ ಖರ್ಜೂರ — ✅ ದಾಳಿಂಬೆ — ✅ ಮೊಟ್ಟೆ — ✅ ಬೇಳೆ — ✅ ಬಾದಾಮಿ — ✅ ಹಾಲು — ✅ ಮೊಸರು
ಇವು ರಕ್ತಹೀನತೆ ಕಡಿಮೆ ಮಾಡಲು ಸಹಕಾರಿ.
ತಪ್ಪಿಸಬೇಕಾದ ಆಹಾರ:
❌ ಹೆಚ್ಚು ಎಣ್ಣೆ — ❌ ಹೆಚ್ಚು ಖಾರ — ❌ ಸೋಡಾ ಪಾನೀಯಗಳು — ❌ ಜಂಕ್ ಫುಡ್ — ❌ ಹೆಚ್ಚು ಸಕ್ಕರೆ — ❌ ಅತಿಯಾದ ಕಾಫಿ
ಇವು ಹೊಟ್ಟೆನೋವು ಹಾಗೂ ಉಬ್ಬರ ಹೆಚ್ಚಿಸಬಹುದು.
🚶♀️ ಮುಟ್ಟಿನ ಸಮಯದಲ್ಲಿ ವ್ಯಾಯಾಮ ಮಾಡಬಹುದೇ?
ಹೌದು, ಹಗುರ ವ್ಯಾಯಾಮಗಳು ನೋವನ್ನು ಕಡಿಮೆ ಮಾಡಲು ಸಹಕಾರಿ:
✔ Walking ✔ Stretching ✔ Yoga ✔ Deep Breathing ✔ Meditation
ಭಾರವಾದ ವ್ಯಾಯಾಮ ಈ ಸಮಯದಲ್ಲಿ ಬೇಡ.
🩺 ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?
ಕೆಳಗಿನ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ:
✅ ನಿರಂತರ 7 ದಿನಕ್ಕಿಂತ ಹೆಚ್ಚು ರಕ್ತಸ್ರಾವ
✅ ಗಂಟೆಗೆ ಒಂದು ಪ್ಯಾಡ್ ನೆನೆಯುವಷ್ಟು ರಕ್ತಸ್ರಾವ
✅ ಅತಿಯಾದ ಹೊಟ್ಟೆನೋವು
✅ ದುರ್ವಾಸನೆ
✅ ಜ್ವರ
✅ ತಲೆಸುತ್ತು ಅಥವಾ ಮೂರ್ಛೆ
❌✔️ ಸಾಮಾನ್ಯ ತಪ್ಪು ಕಲ್ಪನೆಗಳು (Myths vs Facts)
ಮಿಥ್ಯೆ 1: ಮುಟ್ಟಿನ ಸಮಯದಲ್ಲಿ ಸ್ನಾನ ಮಾಡಬಾರದು. ಸತ್ಯ: ಸ್ವಚ್ಛತೆಗಾಗಿ ಪ್ರತಿದಿನ ಸ್ನಾನ ಮಾಡುವುದು ಸೋಂಕು ತಡೆಯಲು ಸಹಕಾರಿ ಮತ್ತು ಉತ್ತಮ.
ಮಿಥ್ಯೆ 2: ಮುಟ್ಟಿನ ಸಮಯದಲ್ಲಿ ದೇವರ ಪೂಜೆ ಮಾಡಿದರೆ ಅಪಶಕುನ. ಸತ್ಯ: ಇದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯವಿಲ್ಲ.
ಮಿಥ್ಯೆ 3: ಮುಟ್ಟಿನ ಸಮಯದಲ್ಲಿ ಕೂದಲು ತೊಳೆಯಬಾರದು. ಸತ್ಯ: ತಲೆ ತೊಳೆಯುವುದರಿಂದ ಯಾವುದೇ ತೊಂದರೆ ಇಲ್ಲ.
ಮಿಥ್ಯೆ 4: ಮುಟ್ಟಿನ ಸಮಯದಲ್ಲಿ ವ್ಯಾಯಾಮ ಮಾಡಬಾರದು. ಸತ್ಯ: ಹಗುರ ವ್ಯಾಯಾಮ ನೋವನ್ನು ಕಡಿಮೆ ಮಾಡುತ್ತದೆ.
✅ ಮುಟ್ಟಿನ ಸಮಯದಲ್ಲಿ ಸ್ವಚ್ಛತೆ — Hygiene Checklist
✔ ಪ್ರತಿ 4–6 ಗಂಟೆಗೆ ಪ್ಯಾಡ್ ಬದಲಾಯಿಸಿ
✔ ಕೈಗಳನ್ನು ಸೋಪಿನಿಂದ ತೊಳೆಯಿರಿ
✔ ಒಣ ಒಳಉಡುಪು ಧರಿಸಿ
✔ ಬಳಸಿದ ಪ್ಯಾಡ್ ಅನ್ನು ಸರಿಯಾಗಿ ವಿಲೇವಾರಿ ಮಾಡಿ
✔ Menstrual Cup ಅನ್ನು ಕುದಿಸಿ ಶುಚಿಗೊಳಿಸಿ
🎒 ಶಾಲಾ ವಿದ್ಯಾರ್ಥಿನಿಯರಿಗೆ ವಿಶೇಷ ಸಲಹೆ
✔ ಶಾಲಾ ಬ್ಯಾಗ್‌ನಲ್ಲಿ ಹೆಚ್ಚುವರಿ ಪ್ಯಾಡ್ ಇರಲಿ
✔ ನೀರಿನ ಬಾಟಲ್ ಇರಲಿ
✔ ಶಿಕ್ಷಕರೊಂದಿಗೆ ಮುಕ್ತವಾಗಿ ಮಾತನಾಡಿ
✔ ಅಗತ್ಯವಿದ್ದರೆ ವಿಶ್ರಾಂತಿ ಪಡೆಯಿರಿ
💼 ಕೆಲಸ ಮಾಡುವ ಮಹಿಳೆಯರಿಗೆ
✔ ಹೆಚ್ಚುವರಿ ಪ್ಯಾಡ್ ಇಟ್ಟುಕೊಳ್ಳಿ
✔ ಹೆಚ್ಚು ನೀರು ಕುಡಿಯಿರಿ
✔ ದೀರ್ಘ ಸಮಯ ಒಂದೇ ಜಾಗದಲ್ಲಿ ಕುಳಿತುಕೊಳ್ಳಬೇಡಿ
✔ ಅಗತ್ಯವಿದ್ದರೆ Pain Relief ಬಗ್ಗೆ ವೈದ್ಯರ ಸಲಹೆ ಪಡೆಯಿರಿ
Menstrual Cup vs Pad vs Cloth
| ವಿಧಾನ | ವೆಚ್ಚ | ಬಳಸುವ ಅವಧಿ | ಪರಿಸರ ಸ್ನೇಹಿ |
|---|---|---|---|
| ಪ್ಯಾಡ್ | ಹೆಚ್ಚು | ಒಂದು ಬಾರಿ | ❌ |
| ಬಟ್ಟೆ | ಕಡಿಮೆ | ಹಲವಾರು ಬಾರಿ | ✔ |
| ಮೆನ್ಸ್ಟ್ರುವಲ್ ಕಪ್ | ಆರಂಭದಲ್ಲಿ ಹೆಚ್ಚು | 5–10 ವರ್ಷ | ✔✔✔ |
🏥 ಸರ್ಕಾರದ ಯೋಜನೆಗಳ ಮಾಹಿತಿ
✅ ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದ ‘ಸುವಿಧಾ’ ಸ್ಯಾನಿಟರಿ ಪ್ಯಾಡ್‌ಗಳು
✅ ಶಾಲಾ ವಿದ್ಯಾರ್ಥಿನಿಯರಿಗೆ ಕೆಲವು ರಾಜ್ಯಗಳಲ್ಲಿ ಉಚಿತ ಪ್ಯಾಡ್ ವಿತರಣೆ
✅ ಆಶಾ ಕಾರ್ಯಕರ್ತೆಯರ ಮೂಲಕ ಮುಟ್ಟಿನ ನೈರ್ಮಲ್ಯ ಜಾಗೃತಿ ಕಾರ್ಯಕ್ರಮಗಳು
ಮುಟ್ಟಿನ ನೈರ್ಮಲ್ಯ ಮತ್ತು ಅರಿವು: ಸಾಮಾನ್ಯ ಪ್ರಶ್ನೋತ್ತರಗಳು (FAQs)
1. ‘ಮುಟ್ಟಿನ ದಾರಿದ್ರ್ಯ’ (Period Poverty) ಎಂದರೆ ಏನು?
ಆರ್ಥಿಕ ಸಂಕಷ್ಟದಿಂದಾಗಿ ಮುಟ್ಟಿನ ಸಮಯದಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್‌ಗಳು ಅಥವಾ ಇತರ ನೈರ್ಮಲ್ಯ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗದ ಸ್ಥಿತಿಯನ್ನು ‘ಮುಟ್ಟಿನ ದಾರಿದ್ರ್ಯ’ ಎನ್ನಲಾಗುತ್ತದೆ. ಇದರೊಂದಿಗೆ ಸ್ವಚ್ಛವಾದ ನೀರು ಮತ್ತು ಶೌಚಾಲಯದ ಸೌಲಭ್ಯವಿಲ್ಲದಿರುವುದು ಕೂಡ ಈ ಸಮಸ್ಯೆಯ ಭಾಗವಾಗಿದೆ.
2. ಮುಟ್ಟಿನ ಸಮಯದಲ್ಲಿ ಬಟ್ಟೆ ಬಳಸುವುದು ಸುರಕ್ಷಿತವೇ?
ಹೌದು, ಹಳೆಯ ಪದ್ಧತಿಯಂತೆ ಬಟ್ಟೆ ಬಳಸುವುದು ತಪ್ಪಲ್ಲ. ಆದರೆ, ಆ ಬಟ್ಟೆಯು ಮೃದುವಾದ ಹತ್ತಿ (Cotton) ಬಟ್ಟೆಯಾಗಿರಬೇಕು, ಪ್ರತಿ ಬಳಕೆಯ ನಂತರ ಅದನ್ನು ಸೋಪು ಹಾಕಿ ಚೆನ್ನಾಗಿ ತೊಳೆದು, ನೇರ ಸೂರ್ಯನ ಬಿಸಿಲಿನಲ್ಲಿ ಒಣಗಿಸುವುದು ಕಡ್ಡಾಯ. ಕತ್ತಲೆಯಲ್ಲಿ ಅಥವಾ ತೇವವಿರುವ ಜಾಗದಲ್ಲಿ ಒಣಗಿಸಿದ ಬಟ್ಟೆ ಬಳಸುವುದರಿಂದ ಗಂಭೀರ ಸೋಂಕುಗಳು ಉಂಟಾಗಬಹುದು.
3. ಮುಟ್ಟಿನ ಕಪ್ (Menstrual Cup) ಎಂದರೇನು? ಇದು ಬಡವರಿಗೆ ಹೇಗೆ ಸಹಕಾರಿ? ಇ
ದು ಸಿಲಿಕೋನ್‌ನಿಂದ ಮಾಡಿದ ಸಣ್ಣ ಕಪ್ ಆಗಿದ್ದು, ಇದನ್ನು ಪ್ಯಾಡ್‌ಗಳ ಬದಲಿಗೆ ಬಳಸಬಹುದು. ಒಂದು ಕಪ್ ಅನ್ನು ಸರಿಯಾಗಿ ನಿರ್ವಹಿಸಿದರೆ 5 ರಿಂದ 10 ವರ್ಷಗಳವರೆಗೆ ಬಳಸಬಹುದು. ಪ್ರತಿ ತಿಂಗಳು ಪ್ಯಾಡ್ ಕೊಳ್ಳುವ ಹಣವಿಲ್ಲದ ಬಡ ವರ್ಗದವರಿಗೆ ಇದು ದೀರ್ಘಕಾಲದವರೆಗೆ ಅತ್ಯಂತ ಆರ್ಥಿಕ ಮತ್ತು ಪರಿಸರ ಸ್ನೇಹಿ ಆಯ್ಕೆಯಾಗಿದೆ.
4. ಸರ್ಕಾರದಿಂದ ಕಡಿಮೆ ದರದಲ್ಲಿ ಪ್ಯಾಡ್‌ಗಳು ಎಲ್ಲಿ ದೊರೆಯುತ್ತವೆ?
ಕೇಂದ್ರ ಸರ್ಕಾರದ ‘ಜನೌಷಧಿ ಕೇಂದ್ರ’ಗಳಲ್ಲಿ ‘ಸುವಿಧಾ’ (Suvidha) ಎಂಬ ಹೆಸರಿನ ಆಕ್ಸೋ-ಬಯೋಡಿಗ್ರೇಡಬಲ್ ಸ್ಯಾನಿಟರಿ ಪ್ಯಾಡ್‌ಗಳು ಕೇವಲ 1 ರೂಪಾಯಿಗೆ ಒಂದು ಪ್ಯಾಡ್ ದರದಲ್ಲಿ ಲಭ್ಯವಿವೆ. ಇದರ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಆಶಾ ಕಾರ್ಯಕರ್ತೆಯರ ಮೂಲಕ ಮಾಹಿತಿ ನೀಡಬೇಕಿದೆ.
5. ಅಸಹಜ ರಕ್ತಸ್ರಾವ ಅಥವಾ ನೋವು ಕಂಡುಬಂದಾಗ ಏನು ಮಾಡಬೇಕು?
ಒಂದೂವರೆ ತಿಂಗಳಿಗೊಮ್ಮೆ ಮುಟ್ಟಾಗುವುದು, ಅತಿಯಾದ ರಕ್ತಸ್ರಾವ ಅಥವಾ ಹದಿನೈದು ದಿನಗಳಿಗಿಂತ ಹೆಚ್ಚು ಕಾಲ ಮುಟ್ಟು ಮುಂದುವರಿಯುವುದು ಹಾರ್ಮೋನ್ ಅಸಮತೋಲನದ ಲಕ್ಷಣವಿರಬಹುದು. ಇಂತಹ ಸಮಯದಲ್ಲಿ ಸಂಕೋಚ ಬಿಟ್ಟು ಸರ್ಕಾರಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞರನ್ನು (Gynecologist) ಕಂಡು ಉಚಿತ ತಪಾಸಣೆ ಮಾಡಿಸಿಕೊಳ್ಳುವುದು ಜೀವಕ್ಕೆ ಸುರಕ್ಷಿತ.
6. ಪ್ಯಾಡ್ ಅನ್ನು ಎಷ್ಟು ಗಂಟೆಗೊಮ್ಮೆ ಬದಲಾಯಿಸಬೇಕು?
ಪ್ರತಿ 4–6 ಗಂಟೆಗೊಮ್ಮೆ.
7. ಮುಟ್ಟಿನ ಸಮಯದಲ್ಲಿ ಶಾಲೆಗೆ ಹೋಗಬಹುದೇ?
ಹೌದು. ನೋವು ಹೆಚ್ಚಿದ್ದರೆ ವಿಶ್ರಾಂತಿ ಪಡೆಯಬಹುದು.
8. Menstrual Cup ಸುರಕ್ಷಿತವೇ?
ಸರಿಯಾದ ರೀತಿಯಲ್ಲಿ ಬಳಸಿದರೆ ಸುರಕ್ಷಿತವಾಗಿದೆ.
9. ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟಿದಂತೆ (Blood Clots) ಬಂದರೆ ಅಪಾಯವೇ?
ಸಣ್ಣ ಗಾತ್ರದ ಹೆಪ್ಪುಗಟ್ಟಿದ ರಕ್ತ ಸಹಜವಾಗಿರಬಹುದು. ಆದರೆ ದೊಡ್ಡ ಪ್ರಮಾಣದಲ್ಲಿ ಅಥವಾ ಅತಿಯಾದ ರಕ್ತಸ್ರಾವದೊಂದಿಗೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
ಮುಟ್ಟಿನ ಸಮಯದಲ್ಲಿ ಅನುಸರಿಸಬೇಕಾದ 3 ಮುಖ್ಯ ನಿಯಮಗಳು
- ಬದಲಾವಣೆ: ಪ್ಯಾಡ್ ಆಗಲಿ ಅಥವಾ ಬಟ್ಟೆಯಾಗಲಿ, ಪ್ರತಿ 4 ರಿಂದ 6 ಗಂಟೆಗೊಮ್ಮೆ ಬದಲಾಯಿಸಲೇಬೇಕು.
- ಸ್ವಚ್ಛತೆ: ದಿನಕ್ಕೆ ಕನಿಷ್ಠ ಒಂದು ಬಾರಿಯಾದರೂ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು.
- ಆಹಾರ: ಕಬ್ಬಿಣಾಂಶವಿರುವ ಆಹಾರಗಳಾದ ಸೊಪ್ಪು, ಬೆಲ್ಲ ಮತ್ತು ಶೇಂಗಾವನ್ನು ಹೆಚ್ಚಾಗಿ ಸೇವಿಸಬೇಕು.
ತೀರ್ಮಾನ
ಹೆಣ್ಣು ಆರೋಗ್ಯವಾಗಿದ್ದರೆ ಮಾತ್ರ ಒಂದು ಸುಸ್ಥಿರ ಸಮಾಜ ಸಾಧ್ಯ. ಮುಟ್ಟು ಎಂಬುದು ಮುಜುಗುರದ ವಿಷಯವಲ್ಲ, ಅದು ಜೀವದ ಉಳಿವಿನ ಪ್ರಕ್ರಿಯೆ. ಆಕೆಯ ಮೌನಕ್ಕೆ ನಾವು ಧ್ವನಿಯಾಗೋಣ.
ಗಮನಿಸಿ: ಈ ಲೇಖನವು ಆರೋಗ್ಯದ ಬಗ್ಗೆ ಸಾಮಾನ್ಯ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಅಸಹಜ ರಕ್ತಸ್ರಾವ, ತೀವ್ರ ನೋವು, ಅನಿಯಮಿತ ಮುಟ್ಟು ಅಥವಾ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಅರ್ಹ ಸ್ತ್ರೀರೋಗ ತಜ್ಞರ ಸಲಹೆ ಪಡೆಯಿರಿ.
ನನ್ನದೊಂದು ಪ್ರಶ್ನೆ: “ನಿಮ್ಮ ಸುತ್ತಮುತ್ತಲಿನ ಬಡ ಹೆಣ್ಣುಮಕ್ಕಳಿಗೆ ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಲು ನೀವು ಯಾವ ಸಣ್ಣ ಹೆಜ್ಜೆ ಇಡಬಲ್ಲಿರಿ? ಕಾಮೆಂಟ್ ಮಾಡಿ ತಿಳಿಸಿ.” 👇
ವಿಜಯಸೂರ್ಯ ಇನ್ಫೋ ಕನ್ನಡ (vijayasuryainfo.com) – ಮಹಿಳಾ ಆರೋಗ್ಯ ಮತ್ತು ಸಾಮಾಜಿಕ ಕಳಕಳಿಯ ಬರಹಗಳಿಗಾಗಿ ಸದಾ ನಿಮ್ಮೊಂದಿಗೆ.
ಗಮನಿಸಿ: ಇಂತಹ ಗಂಭೀರ ವಿಷಯಗಳ ಕುರಿತು ಅರಿವು ಮೂಡಿಸಲು ನಮ್ಮ ಗ್ರೂಪ್ ಸೇರಿ:
ನಮ್ಮ WhatsApp ಚಾನಲ್ ಸೇರಿ: Join Now
ನಮ್ಮ Telegram ಗ್ರೂಪ್ ಸೇರಿ: Join Now